ಬೆಂಗಳೂರು: ವಿದೇಶೀಯರು ಅಕ್ರಮವಾಗಿ ಬೆಂಗಳೂರಿಗೆ ಬಂದು ನೆಲಸುವ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ, ಶ್ರಿಲಂಕಾದಿಂದ ಬಂದ ಮೂವರು ಅಕ್ರಮ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಪಾಕಿಸ್ತಾನದಿಂದ, ಬಾಂಗ್ಲಾದಿಂದ ಬಂದಿದ್ದ ಅಕ್ರಮ ವಲಸಿಗರನ್ನು ಕೆಲವು ತಿಂಗಳ ಹಿಂದೆ ಬಂಧಿಸಲಾಗಿತ್ತು. ಈಗ ಶ್ರೀಲಂಕಾ ಅಕ್ರಮ ವಲಸಿಗರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿಗರು ಅಕ್ರಮವಾಗಿ ಬೆಂಗಳೂರಿಗೆ ಬಂದಿದ್ದು ಹೇಗೆ?
ಶ್ರೀಲಂಕಾದಿಂದ ಅಕ್ರಮವಾಗಿ ವಲಸೆ ಬಂದ ಮೂವರು ಬೆಂಗಳೂರಿನ ದೇವನಹಳ್ಳಿ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದರು. ಶ್ರೀಲಂಕಾದ ಜಾಫ್ನಾದಿಂದ ಬೋಟ್ ಮೂಲಕ ತಮಿಳುನಾಡಿಗೆ ಬಂದಿಳಿದ ವಿದೇಶೀಯರು, ಅಲ್ಲಿಂದ ರಾಮೇಶ್ವರಂಗೆ ಹೋಗಿದ್ದರು. ಮೂವರು ಶ್ರೀಲಂಕಾದ ಪ್ರಜೆಗಳೂ ಸ್ಥಳೀಯ ವ್ಯಕ್ತಿಯೊಬ್ಬನ ಸಹಾಯ ಪಡೆದು ಬೆಂಗಳೂರಿಗೆ ಬಂದು, ಅಕ್ರಮವಾಗಿ ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು.
ಕಳೆದ ಒಂದು ವರ್ಷದಿಂದ ಪಾಸ್ಪೋರ್ಟ್ ಮತ್ತು ವೀಸಾವಿಲ್ಲದೆಯೇ ಇಲ್ಲಿ ಉಳಿದಿದ್ದರು. ವಿದೇಶಿ ಪ್ರಜೆಗಳು ನೆಲೆಸಿದ್ದ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿತ್ತು. ಬೆಂಗಳೂರಿನ ಸಿಸಿಬಿ ಠಾಣೆಯಲ್ಲಿ ಫಾರಿನ್ ಆ್ಯಕ್ಟ್ ಅಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಮೂವರೂ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಡೀಲರ್ಸ್ ಎಂಬ ಮಾಹಿತಿ ಲಭ್ಯವಾಗಿದ್ದು, ಓರ್ವ ಆರೋಪಿ ವಿರುದ್ಧ ಎನ್ಸಿಬಿ ಕೇಸ್ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸಧ್ಯಕ್ಕೆ ಶ್ರೀಲಂಕಾದ ರಾಯಭಾರಿ ಕಚೇರಿಗೆ ಸಿಸಿಬಿ ಈ ಬಗ್ಗೆ ಮಾಹಿತಿ ಕಳುಹಿಸಿದೆ.
ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ವಾಸ ಇದೇ ಮೊದಲಲ್ಲ
ಈ ಹಿಂದೆ ಬಾಂಗ್ಲಾದೇಶದಿಂದ ಬಂದಿದ್ದ ನಾಲ್ವರು ಅಕ್ರಮ ವಲಸಿಗರು ಬೆಂಗಳೂರಿನಲ್ಲಿ ನೆಲೆಸಿರುವುದು ಗೊತ್ತಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್ಪೋರ್ಟ್ನ್ನೂ ಸಹ ಪಡೆದಿದ್ದರು. ಇವರ ಮನೆಗಳಿಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದರು. ಅಷ್ಟೇ ಅಲ್ಲದೇ, ಇನ್ನೊಂದು ಪ್ರಕರಣದಲ್ಲಿ ಹಿಂದೂ ಹೆಸರನ್ನಿಟ್ಟುಕೊಂಡಿದ್ದ ಪಾಕಿಸ್ತಾನಿ ಪ್ರಜೆಗಳು ದಾವಣಗೆರೆಯಲ್ಲಿ ವಾಸವಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಕ್ ಮಹಿಳೆಯೊಬ್ಬಳು ದಾವಣಗೆರೆಯ ಮುಸ್ಲಿಮ್ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆಕೆಯೊಂದಿಗೆ ಉಳಿದ ಪಾಕ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು.
For More Updates Join our WhatsApp Group :

