ಬೆಂಗಳೂರು: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೆ ಸರ್ಕಾರ ನಿರ್ಧರಿಸಿದ್ದು, ಈ ನಡುವಲ್ಲೇ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ.
ಅಧಿಕಾರಕ್ಕೆ ಬರುವುದಕ್ಕೂ ಮುನ್ನ 2023 ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದಗಳನ್ನು ಯಾವುದೇ ವಿಳಂಬ ನೀತಿ ಅನುಸರಿಸದೆ ಭರ್ತಿ ಮಾಡುತ್ತೇವೆಂದು ಭರವಸೆ ನೀಡಿದ್ದರು.
ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ವಾರ್ಷಿಕ 20,000 ಕೋಟಿ ರೂ. ಬೇಕಾಗುತ್ತದೆ. ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುತ್ತೇವೆಂದು ಹೇಳಿದ್ದರು.
ಇದೀಗ ಗ್ಯಾರಂಟಿ ಯೋಜನೆ ಹಾಗೂ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಹಣ ಒದಗಿಸಬೇಕಾಗಿದ್ದು, ಈ ನಡುವಲ್ಲೇ ಖಾಲಿ ಹುದ್ದೆಗಳ ಭರ್ತಿ ಸರ್ಕಾರಕ್ಕೆ ಆರ್ಥಿಕ ಸಂಕಷ್ಟವನ್ನು ಎದುರು ಮಾಡಲಿದೆ ಎಂದು ಹೇಳಲಾಗುತ್ತಿದೆ.
ಪರಿಸ್ಥಿತಿಯನ್ನು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದು, ನೇಮಕಾತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಅದಾಗ್ಯೂ ವಿವಿಧ ಇಲಾಖೆಗಳು ಸಲ್ಲಿಸಿರುವ ಪ್ರಸ್ತಾವನೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.