ಕರ್ನಾಟಕ – ಗೋವಾ ಗಡಿಯಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು : ಹುಬ್ಬಳ್ಳಿ ಮಾರ್ಗದಲ್ಲಿ ಸಂಚಾರ ವ್ಯತ್ಯಯ

ಪಣಜಿ: ಕರ್ನಾಟಕದ ಗಡಿಭಾಗದ ದಕ್ಷಿಣ ಗೋವಾದ ಪರ್ವತ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸರಕು ಸಾಗಣೆ ರೈಲೊಂದು ಹಳಿತಪ್ಪಿದ್ದು, ನೈಋತ್ಯ ರೈಲ್ವೆ ಮಾರ್ಗದಲ್ಲಿ ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

17 ಲೋಡ್ ವ್ಯಾಗನ್‌ಗಳಿದ್ದ ರೈಲು ಹುಬ್ಬಳ್ಳಿ ವಿಭಾಗದ ಸೋನಾಲಿಯಮ್ ಮತ್ತು ದೂಧಸಾಗರ ನಿಲ್ದಾಣಗಳ ನಡುವಿನ ಘಾಟ್ ವಿಭಾಗದಲ್ಲಿ ಇಂದು ಬೆಳಗ್ಗೆ 9.35 ಕ್ಕೆ ಹಳಿತಪ್ಪಿದೆ ಎಂದು ಎಸ್‌ಡಬ್ಲ್ಯೂಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಅವರು ಹೇಳಿದ್ದಾರೆ.

ರೈಲು ಹಳಿತಪ್ಪಿದ ಪರಿಣಾಮ ಮೂರು ರೈಲುಗಳ ಮಾರ್ಗ ಬದಲಿಸಲಾಗಿದೆ ಮತ್ತು ಎರಡು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

140 ಟನ್ ಕ್ರೇನ್‌ಗಳು ಮತ್ತು ಇತರ ಅಗತ್ಯ ಸಾಮಗ್ರಿಗಳೊಂದಿಗೆ ಅಪಘಾತ ಪರಿಹಾರ ರೈಲುಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಮತ್ತು ಹಳಿ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಗೂಡ್ಸ್ ರೈಲು ಹಳಿತಪ್ಪಿದ ಕಾರಣ ರೈಲು ಸಂಖ್ಯೆ 17420/17022 ವಾಸ್ಕೋಡಗಾಮ-ತಿರುಪತಿ/ಹೈದರಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನ್ನು ಮಡಗಾಂವ್, ಕಾರವಾರ, ಪಡೀಲ್, ಸುಬ್ರಹ್ಮಣ್ಯ ರಸ್ತೆ, ಹಾಸನ, ಅರಸೀಕೆರೆ, ಚಿಕ್ಕಜಾಜೂರು, ರಾಯದುರ್ಗ ಮತ್ತು ಬಳ್ಳಾರಿ ಮತ್ತು ಅದರ ಸಾಮಾನ್ಯ ಮಾರ್ಗವಾಗಿ ಚಲಿಸುವಂತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *