ಭಾರತ: ಜಗತ್ತಿನ ಎದುರು ತಾನು ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿ ಬೆಂಬಲ ನೀಡಲ್ಲ ಎಂದು ಹೇಳಿಕೊಂಡೇ ಬರುತ್ತಿರುವ ಪಾಕಿಸ್ತಾನ ಉಗ್ರರಿಗೆ ಸುರಕ್ಷಿತ ನೆಲೆ ಒದಗಿಸುವುದಲ್ಲದೆ ಅವರಿಗೆ ಬೇಕಾದ ಮೂಲಸೌಕರ್ಯಗಳನ್ನು ಕೂಡ ನೀಡುತ್ತಿದೆ. ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಗುರುತಿಸಿಕೊಂಡಿರುವ ಜೈಶ್-ಎ-ಮೊಹಮ್ಮದ್ನ ನಾಯಕ ಮಸೂದ್ ಅಜರ್ಗೆ ಪಾಕಿಸ್ತಾನ ತನ್ನ ನಾಗರಿಕರ ತೆರಿಗೆ ಆದಾಯದಲ್ಲಿ ₹14 ಕೋಟಿ ಹಣ ನೀಡಲು ಸಜ್ಜಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ಗುಜರಾತ್ನ ಭುಜ್ ವಾಯುಪಡೆ ನಿಲ್ದಾಣದಲ್ಲಿ ವಾಯುಪಡೆಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನ ಭಯೋತ್ಪಾದಕರಿಗೆ ಮೂಲಸೌಕರ್ಯವನ್ನು ಒದಗಿಸಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಆಪರೇಷನ್ ಸಿಂಧೂರ ದಾಳಿಯ ವೇಳೆ ಧ್ವಂಸವಾಗಿರುವ ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಮರುನಿರ್ಮಾಣ ಮಾಡಲು ಪಾಕಿಸ್ತಾನ ಹಣ ನೀಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಕ್ಕೆ 1 ಬಿಲಿಯರ್ ಡಾಲರ್ ಸಾಲ ನೀಡಲು ಮುಂದಾಗಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ತನ್ನ ನಿರ್ಧಾರವನ್ನು ಮರುಪರಿಶೀಲನೆ ಮಾಡಲಿ ಎಂದು ರಾಜನಾಥ್ ಸಿಂಗ್ ಆಗ್ರಹಿಸಿದ್ದಾರೆ. ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿಶ್ವಸಂಸ್ಥೆಯಿಂದಲೇ ಭಯೋತ್ಪಾದಕ ಎಂದು ಪರಿಗಣಿಸಲ್ಪಟ್ಟಿದ್ದರೂ ಸಹ, ಪಾಕಿಸ್ತಾನ ತನ್ನ ನಾಗರಿಕರಿಂದ ಸಂಗ್ರಹಿಸಿದ ತೆರಿಗೆಯನ್ನು ಸುಮಾರು 14 ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಮುರಿಡ್ಕೆ ಮತ್ತು ಬಹವಾಲ್ಪುರದಲ್ಲಿರುವ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ನ ಭಯೋತ್ಪಾದಕ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡಲು ಪಾಕಿಸ್ತಾನ ಸರ್ಕಾರ ಆರ್ಥಿಕ ಸಹಾಯವನ್ನು ಘೋಷಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಭಯೋತ್ಪಾದನೆಗೆ ಬಹಿರಂಗ ಸಹಾಯ ಪಾಕಿಸ್ತಾನಕ್ಕೆ ಐಎಂಎಫ್ ನೀಡುವ 1 ಬಿಲಿಯನ್ ಡಾಲರ್ ನೆರವಿನ ಬಹುಪಾಲು ಭಾಗವು ಭಯೋತ್ಪಾದಕ ಮೂಲಸೌಕರ್ಯಕ್ಕೆ ಹೋಗಲಿದೆ ಎಂದು ಅವರು, ಇದನ್ನು ಪರೋಕ್ಷ ಭಯೋತ್ಪಾದನಾ ಹಣಕಾಸು ಎಂದು ಕರೆದರು ಮತ್ತು ಭಾರತದ ಕೊಡುಗೆಗಳನ್ನು ಅಂತಹ ಉದ್ದೇಶಗಳಿಗೆ ಬಳಸಬಾರದು ಎಂದು ಆಗ್ರಹಿಸಿದರು.
ಐಎಂಎಫ್ನ ಒಂದು ಬಿಲಿಯನ್ ಡಾಲರ್ ನೆರವಿನ ಬಹುಪಾಲು ಭಾಗವನ್ನು ಭಯೋತ್ಪಾದಕ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಲು ಬಳಸಲಾಗುತ್ತದೆ. ಇದನ್ನು ಅಂತರರಾಷ್ಟ್ರೀಯ ಸಂಸ್ಥೆಯಾದ ಐಎಂಎಫ್ ಪರೋಕ್ಷ ಹಣಕಾಸು ಎಂದು ಪರಿಗಣಿಸುವುದಿಲ್ಲವೇ? ಪಾಕಿಸ್ತಾನಕ್ಕೆ ನೀಡುವ ಯಾವುದೇ ಹಣಕಾಸಿನ ನೆರವು ಭಯೋತ್ಪಾದಕ ನಿಧಿಗಿಂತ ಕಡಿಮೆಯಿಲ್ಲ. ಭಾರತ ಐಎಂಎಫ್ಗೆ ನೀಡುವ ಹಣವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪಾಕಿಸ್ತಾನ ಅಥವಾ ಯಾವುದೇ ಇತರ ದೇಶದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ರಚಿಸಲು ಬಳಸಬಾರದು ಎಂದು ಹೇಳಿದ್ದಾರೆ.