ವಿಮಾನಯಾನ ಸಚಿವಾಲಯ ಅಧಿಕಾರಿಗಳ ಭೇಟಿ.
ದೇವನಹಳ್ಳಿ: ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ ಇಂಡಿಗೋ ವಿಮಾನಗಳಲ್ಲಿ ಬಹಳ ವ್ಯತ್ಯಯವಾಗುತ್ತಿದೆ. ಸರಿ ಸುಮಾರು ಒಂದು ವಾರಗಳ ಕಾಲ ವಿಮಾನಗಳ ಸಂಚಾರದಲ್ಲಾದ ತೊಡಕಿನಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿಧ ನಗರಗಳಿಗೆ ತೆರಳಲು ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಿದ್ದರೂ ವಿಮಾನಗಳು ಹಾರಾಟ ನಡೆಸದ ಕಾರಣ ಅಥವಾ ವಿಳಂಬವಾಗದ ಕಾರಣ ಬಹಳ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಬೆನ್ನಲ್ಲೇ ಬೆಂಗಳೂರು ಏರ್ಪೋರ್ಟ್ಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ವಿಮಾನಯಾನ ಸಚಿವಾಲಯದ ನಿರ್ದೇಶಕ ಸಂಕೇಶ್ ಮೆಹ್ತಾ ನೇತೃತ್ವದ ಅಧಿಕಾರಿಗಳ ತಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್ಪೋರ್ಟ್ಗೆ ಭೇಟಿ ನೀಡಿದ್ದು, ಕೈಗೊಂಡ ಕ್ರಮಗಳ ಜೊತೆಗೆ ಸಮಸ್ಯೆಗಳ ಪರಿಶೀಲನೆ ನಡೆಸಿದೆ. ಈ ಬಗ್ಗೆ ಟರ್ಮಿನಲ್ 1ರಲ್ಲಿ ಆಡಳಿತ ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಂಕೇಶ್ ಮೆಹ್ತಾ, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಲಗೇಜ್ ಸೇರಿದಂತೆ ಎಲ್ಲಾ ಸಮಸ್ಯೆಗಳು ಹಂತ ಹಂತವಾಗಿ ಸರಿ ಹೋಗುತ್ತಿವೆ. ಈಗಾಗಲೇ ವಿಮಾನಯಾನ ಸಚಿವಾಲಯದಿಂದ ಏರ್ಲೈನ್ಸ್ ಗೆ ಸೂಚನೆ ನೀಡಲಾಗಿದ್ದು, ವಿಮಾನಯಾನ ಸಚಿವರೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಏರ್ಪೋರ್ಟ್ ದೇಶದಲ್ಲೇ ಅತಿ ಹೆಚ್ಚು ಪ್ರಯಾಣಿಕರು ಬರುವ ಸ್ಥಳ. ಹೀಗಾಗಿ ಏರ್ಪೋರ್ಟ್ಗೆ ಭೇಟಿ ನೀಡಿ ಕೆಐಎಬಿ ಹಾಗೂ ಇಂಡಿಗೋ ಏರ್ಲೈನ್ಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರೋದಾಗಿ ಅವರು ತಿಳಿಸಿದ್ದಾರೆ.
ಇಂದು ಕೂಡ ವಿಮಾನಗಳ ಹಾರಾಟ ರದ್ದು
ಸತತ 8ನೇ ದಿನವೂ ಬೆಂಗಳೂರು ಏರ್ಪೋರ್ಟ್ನಿಂದ ಹಾರಾಟ ನಡೆಸಬೇಕಿದ್ದ 121 ಇಂಡಿಗೋ ವಿಮಾನಗಳು ರದ್ದಾಗಿವೆ. ನಿರ್ಗಮಿಸಬೇಕಿದ್ದ 63, ಆಗಮಿಸಬೇಕಿದ್ದ 58 ವಿಮಾನಗಳು ಹಾರಾಟ ನಡೆಸಿಲ್ಲ. ರದ್ದಾದ ವಿಮಾನಗಳ ಕುರಿತು ಪ್ರಯಾಣಿಕರಿಗೆ ಮೊದಲೇ ಮಾಹಿತಿ ನೀಡಲಾಗಿದ್ದು, ಏರ್ಪೋರ್ಟ್ಗೆ ಬಾರದಂತೆ ಏರ್ಲೈನ್ಸ್ ಸಿಬ್ಬಂದಿ ಸಂದೇಶ ರವಾನಿಸಿದ್ದರು. ಈ ನಡುವೆಯೂ ವಿವಿಧೆಡೆಗೆ ತೆರಳಲು ಆಗಮಿಸಿರುವ ಜನರು ಬೆಳಗ್ಗೆಯಿಂದ ಟರ್ಮಿನಲ್ 1ರಲ್ಲಿ ಕಾದು ಕುಳಿತ ದೃಶ್ಯಗಳು ಕಂಡುಬಂತು.
For More Updates Join our WhatsApp Group :




