1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್: 2ಕೋಟಿ ಉದ್ಯೋಗ ಸೃಷ್ಟಿ ಭರವಸೆ

ನವದೆಹಲಿ: ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ನಿರಂತರ ಆರೋಪ ಮಾಡುತ್ತಾ ಬಂದಿದ್ದವು. ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದವು. ಈ ನಡುವೆ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಮಂಗಳವಾರ) ಮಂಡಿಸಿದ ಬಜೆಟ್​ನಲ್ಲಿ ಯುವಕರಿಗೆ ಉದ್ಯೋಗ ಒದಗಿಸಲು ಐದು ವರ್ಷಗಳ ಅವಧಿಯಲ್ಲಿ 1 ಕೋಟಿ ಯುವಕರಿಗೆ 500 ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಯನ್ನು ಪ್ರಾರಂಭಿಸುವುದು ಘೋಷಣೆ ಮಾಡಿದ್ದಾರೆ.

ಯೋಜನೆಯಡಿಯಲ್ಲಿ, ಯುವಕರಿಗೆ ತಿಂಗಳಿಗೆ 5,000 ರೂಪಾಯಿಗಳ ಇಂಟರ್ನ್‌ಶಿಪ್ ಭತ್ಯೆ ಮತ್ತು 6,000 ರೂಪಾಯಿಗಳ ಒಂದು ಬಾರಿ ಸಹಾಯವನ್ನು ನೀಡಲಾಗುತ್ತದೆ. ಪಿಎಂ ಪ್ಯಾಕೇಜ್ ಅಡಿ 5ನೇ ಯೋಜನೆಯಾಗಿ, ನಮ್ಮ ಸರ್ಕಾರವು ಐದು ವರ್ಷಗಳಲ್ಲಿ 1 ಕೋಟಿ ಯುವಕರಿಗೆ 500 ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಲು ಸಮಗ್ರ ಯೋಜನೆಯನ್ನು ಪ್ರಾರಂಭಿಸುತ್ತದೆ” ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.

”ಈ ಯುವಕರು 12 ತಿಂಗಳ ಕಾಲ ನಿಜ ಜೀವನದ ವ್ಯಾಪಾರದ ವಾತಾವರಣ ಸೇರಿದಂತೆ ವಿವಿಧ ವೃತ್ತಿಗಳು ಮತ್ತು ಉದ್ಯೋಗಾವಕಾಶಗಳಿಗೆ ಒಡ್ಡಿಕೊಳ್ಳುತ್ತಾರೆ. ಕಂಪನಿಗಳು ತಮ್ಮ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ನಿಧಿಯಿಂದ ತರಬೇತಿ ವೆಚ್ಚ ಮತ್ತು ಇಂಟರ್ನ್‌ಶಿಪ್ ವೆಚ್ಚದ ಶೇಕಡಾ 10 ರಷ್ಟು ಭರಿಸುತ್ತವೆ” ಎಂದು ಹೇಳಿದರು.

ಕಂಪನಿಗಳ ಕಾಯಿದೆ 2013ರ ಪ್ರಕಾರ, ಲಾಭದಾಯಕ ಸಂಸ್ಥೆಗಳ ಕೆಲವು ವರ್ಗಗಳು ನಿರ್ದಿಷ್ಟ ಹಣಕಾಸು ವರ್ಷದಲ್ಲಿ CSR ಚಟುವಟಿಕೆಗಳಿಗೆ ಮೂರು ವರ್ಷಗಳ ವಾರ್ಷಿಕ ನಿವ್ವಳ ಲಾಭದ ಕನಿಷ್ಠ 2 ಪ್ರತಿಶತವನ್ನು ವಿನಿಯೋಗಿಸಬೇಕಾಗುತ್ತದೆ.

ನಿರುದ್ಯೋಗಿಗಳಿಗೆ ಮೂರು ಯೋಜನೆಗಳು; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಮೂರು ಉದ್ಯೋಗ ಸಂಬಂಧಿತ ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. ರೂ. 7.5 ಲಕ್ಷ ಸಾಲ ಸೌಲಭ್ಯ ನೀಡಲು ಕೌಶಲ್ಯ ಸಾಲ ಯೋಜನೆಯನ್ನು ಪರಿಷ್ಕರಿಸಲಾಗುವುದು ಎಂದರು. ಈ ಯೋಜನೆಯ ಮೂಲಕ ವಾರ್ಷಿಕ 25,000 ಯುವಕರು ಪ್ರಯೋಜನ ಪಡೆಯಲಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವರು ತಿಳಿಸಿದ್ದಾರೆ.

1 ಸಾವಿರ ಕೈಗಾರಿಕಾ ತರಬೇತಿ ಸಂಸ್ಥೆ ಉನ್ನತೀಕರಣ: ಉದ್ಯೋಗ ಸೃಷ್ಟಿಸುವ ಜೊತೆಗೆ ಯುವಜನತೆಯನ್ನು ಕೌಶಲ್ಯಯುತರನ್ನಾಗಿ ಮಾಡಬೇಕಿದೆ. ಒಟ್ಟಾರೆ 1 ಸಾವಿರ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Leave a Reply

Your email address will not be published. Required fields are marked *