ಮೈಸೂರು: ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ ನಡೆಸಲಾಗುವುದು. ಮೊದಲು ಮೀಸಲಾತಿ ಹಾಗೂ ವಲಯವಾರು ವಿಭಾಗಗಳನ್ನು ರಚಿಸಲಾಗುವುದು. ಚುನಾವಣೆ ವಿಳಂಬ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ದೊರಕಿದ್ದು ಚುನಾವಣೆ ಯಾವಾಗ ನಡೆಸಲಾಗುತ್ತದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸರ್ವಪಕ್ಷ ಸಭೆ ನಡೆಸಲಾಗುವುದು. ಯಾವ ರೀತಿ ವಿಭಾಗಗಳನ್ನು ಮಾಡಬೇಕು ಎಂದು ಅವರ ಬಳಿಯೂ ಸಲಹೆ ಕೇಳಲಾಗುವುದು. ಸದನದಲ್ಲಿಈ ಬಗ್ಗೆ ಎಲ್ಲರೂ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕ್ಯಾಬಿನೆಟ್ ಉಪ ಸಮಿತಿ ರಚನೆ ಮಾಡಲಾಗಿತ್ತು. ಅವರ ಶೇ 90 ರಷ್ಟು ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆ ನಡೆಸಲಾಗುವುದು. ಹೊಸ ಪ್ರದೇಶಗಳನ್ನು ಸೇರಿಸಲು ವಿಳಂಬವಾಗುತ್ತದೆ. ಈಗ ಹೇಗಿದೆಯೋ ಅದೇ ರೀತಿ ಮುಂದುವರೆಯಲಾಗುವುದು ಎಂದು ತಿಳಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರು ಇದನ್ನು ಕ್ವಾರ್ಟರ್ ಬೆಂಗಳೂರು ಎಂದು ಲೇವಡಿ ಮಾಡಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಈ ವಿಧೇಯಕವು ಮೊದಲಿಗೆ ಬಂದಾಗಲೇ ವಿರೋಧ ವ್ಯಕ್ತಪಡಿಸಬೇಕಿತ್ತು. ಸದನದಲ್ಲೇಕೆ ಜಾರಿಗೆ ತರಲು ಒಪ್ಪಿಗೆ ಸೂಚಿಸಿದರು. ಅವರು ಕ್ವಾರ್ಟರ್ ಬೆಂಗಳೂರು, ಫುಲ್ ಬೆಂಗಳೂರು ಎಂದು ಏನಾದರು ಹೇಳಲಿ. ಆದರೆ ಅವರು ಏಕೆ ಸದನದಲ್ಲಿ ಸಲಹೆಗಳನ್ನು ನೀಡಿದರು. ವಿರೋಧ ಪಕ್ಷದವರು ಅಷ್ಟು ಮಾತನಾಡಲಿಲ್ಲ ಎಂದರೆ ಗೌರವ ಕಡಿಮೆ ಅಲ್ಲವೇ? ಹೀಗಾಗಿ ಮಾತನಾಡುತ್ತಿದ್ದಾರೆ. ಅವರು ಬೆಂಗಳೂರಿನ ಒಂದು ಭಾಗ ಅವರಿಗೆ ಏನು ಗೌರವ ನೀಡಲಾಗುವುದೋ ಅದನ್ನು ನಾವು ನೀಡುತ್ತೇವೆ ಎಂದರು. ಶಿವಕುಮಾರ್ ಹಿಡಿದ ಕೆಲಸ ಮಾಡಿ ಮುಗಿಸುತ್ತಾರೆ. ಆದರೆ ರಾಮನಗರ ಹೆಸರು ಬದಲಾವಣೆಯಲ್ಲಿ ತಡವಾಗುತ್ತಿರುವ ಕುರಿತು ಮಾತನಾಡಿ, ತಡವಾಗುತ್ತಿದೆ ಎಂದು ಹೇಳಿದವರು ಯಾರು? ಒಳ್ಳೆ ಶುಭ ಮುಹೂರ್ತ, ಶುಭ ಘಳಿಗೆಯಲ್ಲಿ ಕಾನೂನಿನ ಅಡಿಯಲ್ಲಿಯೇ ಘೋಷಣೆ ಮಾಡಲಾಗುವುದು. ಶೀಘ್ರದಲ್ಲಿಯೇ ಸಮಯ ತಿಳಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಪೆಹಲ್ಗಾಮ್ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಕಾಂಗ್ರೆಸ್ ತೀರ್ಮಾನ ಮಾಡಿರುವ ಕುರಿತು ಮಾತನಾಡಿ, ಪಕ್ಷ, ವ್ಯಕ್ತಿಗಿಂತ ದೇಶ ದೊಡ್ಡದು ಎಂಬುದು ನಮ್ಮ ಒಮ್ಮತದ ತೀರ್ಮಾನ. ಪ್ರಧಾನಿಗಳಿಗೆ ನೀವು ಯಾವ ತೀರ್ಮಾನ ತೆಗೆದುಕೊಂಡರೂ ಬೆಂಬಲ ಸೂಚಿಸುವುದಾಗಿ, ಜೊತೆಗೆ ಯಾವ ರಾಷ್ಟ್ರಕ್ಕೂ ಮಣಿಯಬಾರದು ಎಂದು ಹೇಳಿದ್ದೆವು ಎಂದು ತಿಳಿಸಿದರು.
ನಮ್ಮ ಸಂಸದರು ಸಹಿ ಮಾಡಿ ಪ್ರಧಾನಿಗಳಿಗೆ ನೀಡುತ್ತಿದ್ದಾರೆ. ಏನು ಬೆಳವಣಿಗೆಯಾಗಿದೆ ಎಂದು ತಿಳಿಸಬೇಕು ಎಂದು ಹೇಳಿದ್ದೇವೆ. ಬೇರೆ ದೇಶದವರು ನಮ್ಮ ದೇಶದ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ಇಂದಿರಾಗಾಂಧಿ ಅವರ ಕಾಲದಿಂದಲೂ ನಾವು ಯಾರ ಹಂಗಿಗೂ ಒಳಗಾದವರಲ್ಲ. ಇಂತಹ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆ ಮಾಡಬೇಕು ಎಂದು ಕೇಳುವುದು ನಮ್ಮ ಹಕ್ಕು ಎಂದರು. ಕಬಿನಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ಗಳ ಕುರಿತು ಮಾತನಾಡಿದ ಅವರು, ಈ ಬಗ್ಗೆ ಪಟ್ಟಿ ಮಾಡಿ ನನಗೆ ನೀಡಿ ಇದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದ ಅವರು, 63 ನೇ ಹುಟ್ಟುಹಬ್ಬ ಆಚರಣೆಗೆ ಶುಭಸುದ್ದಿ ನೀಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಹೊರಗಡೆ ಹೋಗುವುದು ಬೇಡವೆಂದು ನಮ್ಮ ಕುಟುಂಬ ಸದಸ್ಯರ ಜೊತೆ ರಾಜ್ಯದ ಅರಣ್ಯ ಸಂಪತ್ತು ವೀಕ್ಷಣೆ ಮಾಡಿದ್ದೇನೆ. ಈ ಬಗ್ಗೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದರು.