ಅಸುರಕ್ಷಿತರ ಆಹಾರ : ರಾಜ್ಯಾದ್ಯಂತ 2,800 ಕ್ಕೂ ಹೆಚ್ಚು ತಿನಿಸುಗಳ ಪರಿಶೀಲನೆ

ಅಸುರಕ್ಷಿತರ ಆಹಾರಗಳ ವಿರುದ್ಧ FSSAI ಸಮರ

ಬೆಂಗಳೂರು: ಅಸುರಕ್ಷಿತರ ಆಹಾರಗಳ ಮೇಲೆ ಸಮರ ಸಾರಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆ.30 ಮತ್ತು 31ರಂದು ರಾಜ್ಯಾದ್ಯಂತ ಆರೋಗ್ಯ ಸುರಕ್ಷತಾ ಅಭಿಯಾನ ನಡೆಸಿದ್ದು, 2,800 ಕ್ಕೂ ಹೆಚ್ಚು ತಿನಿಸುಗಳನ್ನು ಪರಿಶೀಲನೆ ನಡೆಸಿದೆ.

ಮೊದಲ ದಿನ (ಆ.30) ಬೀದಿ ಆಹಾರ ಮಾರಾಟಗಾರರು ಸೇರಿದಂತೆ 753 ಆಹಾರ ಸಂಸ್ಥೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬೆಂಗಳೂರಿನಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೀದಿ ವ್ಯಾಪಾರ ಮಳಿಗೆಗಳು ಸೇರಿದಂತೆ ಒಟ್ಟು 67 ಆಹಾರ ಮಾರಾಟ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಯಾವುದೇ ಪ್ರಮುಖ ಉಲ್ಲಂಘನೆ ಕಂಡು ಬಂದಿಲ್ಲ. ಆದರೆ, ಅನೇಕ ಸಂಸ್ಥೆಗಳಲ್ಲಿ ಶುಚಿತ್ವದ ಕೊರತೆಗಾಗಿ ರೂ 1.8 ಲಕ್ಷ ದಂಡವನ್ನು ಸಂಗ್ರಹಿಸಿದ್ದಾರೆ. ಮುಖ್ಯವಾಗಿ ಸ್ವಚ್ಛತೆ ಕುರಿತು ಅರಿವು ಮೂಡಿಸಿ ಪರವಾನಗಿಗೆ ಅರ್ಜಿ ಸಲ್ಲಿಸುವಂತೆ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿದುಬಂದಿದೆ.

ಆಗಸ್ಟ್ 31 ರಂದು ಶನಿವಾರ 2,820 ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೀದಿ ಬದಿ ತಿನಿಸು ಮಾರಾಟಗಳನ್ನು ತಪಾಸಣೆ ನಡೆಸಿದ್ದು, 6,31,750 ರೂ. ದಂಡ ವಿಧಿಸಿದ್ದಾರೆ. ತಪಾಸಣೆ ವೇಳೆ 666 ಅಂಗಡಿಗಳು ಪರವಾನಗಿ ಇಲ್ಲದೆ ನಡೆಯುತ್ತಿರುವುದು ಪತ್ತೆಯಾಗಿದ್ದು, ಶುಚಿತ್ವ ಕಾಪಾಡದ 1080 ಅಂಗಡಿಗಳಿಗೆ ದಂಡ ವಿಧಿಸಲಾಗಿದೆ. 24 ಸಂಸ್ಥೆಗಳಿಗೆ ಲೇಬಲ್‌ಗೆ ಸಂಬಂಧಿಸಿದ ವಿಚಾರಕ್ಕೆ ದಂಡ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಅಧಿಕಾರಿಗಳು ಭಾನುವಾರ ಮತ್ತು ಬುಧವಾರ ಮಾಂಸ, ಮೊಟ್ಟೆ ಮತ್ತು ಮೀನಿನ ಮಾದರಿಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಕೂಡ ಈ ಕುರಿತು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆಹಾರ ಗುಣಮಟ್ಟ ಮತ್ತು ಶುಚಿತ್ವದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *