ಅಹಮದಾಬಾದ್: ಇಡೀ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳು RCB ಟ್ರೋಫಿ ಗೆದ್ದ ಖುಷಿಯಲ್ಲಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೇಡಿಕೆ ಈಡೇರಿಸಿದ ದೇವರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಆರ್‌ಸಿಬಿ ಅಭಿಮಾನಿಗಳ ಸಾಮ್ರಾಜ್ಯ ಕಟ್ಟಿದ ಕೊಹ್ಲಿಗೂ ಧನ್ಯವಾದ ಹೇಳ್ತಿದ್ದಾರೆ. ಈ ನಡುವೆ ನಿವೃತ್ತಿ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಕೊಹ್ಲಿ Virat Kohli ಉತ್ತರಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸದ್ಯಕ್ಕೆ ನಿವೃತ್ತಿ ಇಲ್ಲ ಎನ್ನುವ ಗುಡ್‌ನ್ಯೂಸನ್ನೂ ಕೊಟ್ಟಿದ್ದಾರೆ.

ನಿವೃತ್ತಿಯ ಕುರಿತು ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ, ನನಗೆ ಈ ಆಟ ಆಡಲು ಇನ್ನೂ ಕೆಲ ವರ್ಷಗಳ ಅವಕಾಶವಿದೆ. ನಿವೃತ್ತಿಗೆ ಇನ್ನೂ ಸಮಯವಿದೆ. ಅದಕ್ಕೂ ಮೊದಲು ನನ್ನಲ್ಲಿರುವ ಸಂಪೂರ್ಣ ಆಟ ಆಡಲು ಭಯಸುತ್ತೇನೆ. ಕೊನೆಗೂ ನನ್ನ ಮಡಿಲಿಗೆ ಕಪ್ ಕೊಟ್ಟಿದ್ದಕ್ಕೆ ಆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಅಲ್ಲದೇ… ನಾನು ಈ ರಾತ್ರಿ ಮಗುವಿನಂತೆ ಮಲಗುತ್ತೇನೆ ಎಂದು ಹೇಳಿದ್ದರಲಲ್ದೇ… ನನ್ನ ಹೃದಯ, ಆತ್ಮ ಎರಡೂ ಬೆಂಗಳೂರಿಗಾಗಿಯೇ.. ಐಪಿಎಲ್ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ ಎಂದು ಭಾವುಕವಾಗಿ ನುಡಿದರು.
ನಾನು ಪ್ರಭಾವಿ ಆಟಗಾರನಾಗಿ ಆಡಲು ಬಯಸುವುದಿಲ್ಲ, ನಾನು ಫೀಲ್ಡಿಂಗ್ ಮಾಡಿ ಪ್ರಭಾವ ಬೀರಲು ಬಯಸುತ್ತೇನೆ ಎಂದರಲ್ಲದೇ, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ.

ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ
ಬಳಿಕ ಕಪ್ ಗೆದ್ದ ಸಂಭ್ರಮದಲ್ಲೂ ಬೆಂಗಳೂರನ್ನು ಮರೆಯದ ಕೊಹ್ಲಿ… ಕಪ್ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು.

ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.