ಸಫಾರಿ ಸ್ಥಗಿತ, ಪುನಾರಂಭ ಸಮರ್ಥಿಸಿಕೊಂಡ ಈಶ್ವರ ಖಂಡ್ರೆ.

ಸಫಾರಿ ಸ್ಥಗಿತ, ಪುನಾರಂಭ ಸಮರ್ಥಿಸಿಕೊಂಡ ಈಶ್ವರ ಖಂಡ್ರೆ

ಸಫಾರಿ ಸ್ಥಗಿತಕ್ಕೆ ಕಾರಣ: ಈಶ್ವರ ಖಂಡ್ರೆ ಸಮರ್ಥನೆ.

ಬೆಂಗಳೂರು: ಕಳೆದ ನವೆಂಬರ್ ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತು ಬದ್ಧವಾಗಿ ಪುನಾರಂಭ ಮಾಡಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದರು. ಸಫಾರಿ ದೇಶಾದ್ಯಂತ ಹಲವು ವರ್ಷದಿಂದ ನಡೆಯುತ್ತಿದೆ. ಒಂದು ಸಮೀಕ್ಷೆಯನ್ನೂ ನಡೆಸದೆ ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದರು.

ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು, ಸಫಾರಿಯನ್ನು ಏಕಾಏಕಿ ನಿಲ್ಲಿಸಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಮೂರು ಅಮೂಲ್ಯ ಜೀವಹಾನಿ ಆಗಿತ್ತು, ಒಬ್ಬರು ಶಾಶ್ವತವಾಗಿ ಅಂಗವಿಕಲರಾದರು, ಹುಲಿಗಳು ಕಾಡಿನಿಂದ ಹೊರಗೆ ಬಂದು ದಾಳಿ ಮಾಡುತ್ತಿದ್ದವು. ಜನರ ಅಮೂಲ್ಯ ಜೀವ ರಕ್ಷಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು.

ಮಿಗಿಲಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ  ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕೇಂದ್ರ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಯನ್ನೂ ಒಳಗೊಂಡ ತಜ್ಞರ ಸಮಿತಿ ರಚಿಸಿ, ಆ ತಜ್ಞರ ಸಮಿತಿಯ ಪ್ರಾಥಮಿಕ ವರದಿಯ ಆಧಾರದಲ್ಲಿ ಸಫಾರಿ ಪುನಾರಂಭ ಮಾಡಲಾಗಿದೆ ಎಂದು ವಿವರಿಸಿದರು.

1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು. ಕಳೆದ 3 ವರ್ಷದ ಹಿಂದೆ ಗಣತಿ ನಡೆದಾಗ ಅಲ್ಲಿ 150 ಹುಲಿ ಇದ್ದವು. ಈಗ ಹುಲಿಗಳ ಸಂಖ್ಯೆ 175 ಹುಲಿ ಇವೆ. ಕಾಡಿನ ಧಾರಣಾ ಸಾಮರ್ಥ್ಯ ತಿಳಿಯಲು ತಜ್ಞರ ಸಮಿತಿಯಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಕಾಡು ಹೆಚ್ಚುತ್ತಿಲ್ಲ. ಬದಲಾಗಿ ಕ್ಷೀಣಿಸುತ್ತಿದೆ. ಸಫಾರಿ  ಪುನಾರಂಭ ಮಾಡಿದ ಬಳಿಕ ಪ್ರತಿಷ್ಠಾನಕ್ಕೆ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದಲ್ಲಿ ಜನಸಂಪರ್ಕ ಸಭೆ ಮಾಡಲು, ಶಿಕ್ಷಣ, ಮೂಲಸೌಕರ್ಯ ಹೆಚ್ಚಳಕ್ಕೆ, ಉದ್ಯೋಗ ಸೃಷ್ಟಿಗೆ ಬಳಸಲು ಸೂಚಿಸಲಾಗಿದೆ ಎಂದು ಸದನಕ್ಕೆ ಈಶ್ವರ ಖಂಡ್ರೆ ತಿಳಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *