ಇಸ್ಲಾಮಾಬಾದ್: ಪಾಕಿಸ್ತಾನದ ಕೇಂದ್ರೀಯ ಸುಪೀರಿಯರ್ ಸರ್ವೀಸಸ್ (CSS) ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ರಾಜೇಂದರ್ ಮೇಘವಾರ್ ಎಂಬುವವರು ಪಾಕಿಸ್ತಾನ ಪೊಲೀಸ್ ಸೇವೆ(Police Service of Pakistan)ಗೆ ಆಯ್ಕೆಯಾದ ಮೊದಲ ‘ಹಿಂದು’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಾಕಿಸ್ತಾನ ಪೊಲೀಸ್ ಸೇವೆಗೆ ಆಯ್ಕೆಯಾದ ನಂತರ ಫೈಸಲಾಬಾದ್‌ನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‌ಪಿ) ನೇಮಕಗೊಂಡಿದ್ದಾರೆ. ರಾಜೇಂದರ್ ಮೇಘವಾರ್, ಸಿಂದ್ ಪ್ರಾಂತ್ಯದ ಬಾದಿನ್ ಪ್ರದೇಶದವರು. ಪಾಕಿಸ್ತಾನದಲ್ಲಿ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ದರ್ಜೆಯ ಹುದ್ದೆಗಳಲ್ಲಿ ಹಿಂದೂ ಸಮುದಾಯದವರು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಉನ್ನತ ಹುದ್ದೆಯಾದ ‘ಪಾಕಿಸ್ತಾನ ಪೊಲೀಸ್ ಸೇವೆ’ಗೆ ಹಿಂದೂ ವ್ಯಕ್ತಿಯೊಬ್ಬರು ಆಯ್ಕೆಯಾಗಿದ್ದಾರೆ
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೂಲಕ ತಳಮಟ್ಟದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬಹುದು. ಇಂತಹ ಅವಕಾಶ ಇತರೆ ಇಲಾಖೆಗಳಲ್ಲಿ ಸಿಗುವುದಿಲ್ಲ’ ಎಂದು ಉನ್ನತ ಹುದ್ದೆಗೆ ಆಯ್ಕೆಯಾದ ನಂತರ ರಾಜೇಂದರ್ ಸಂತಸ ವ್ಯಕ್ತಪಡಿಸಿದ್ದಾರೆ. ರಾಜೇಂದರ್ ಮೇಘವಾರ್ ನೇಮಕವು ಪಾಕಿಸ್ತಾನ ಪೊಲೀಸರಲ್ಲಿ ಇನ್ನಷ್ಟು ಸಾಧನೆಗಳನ್ನು ತರಲಿದೆ. ಹಿಂದೂ ಅಧಿಕಾರಿಯೊಬ್ಬರು ಪಾಕಿಸ್ತಾನ ಪೊಲೀಸ್ ಪಡೆಯ ಭಾಗವಾಗಿರುವುದು ಸಂತಸ ತಂದಿದೆ. ಇದು ಪೊಲೀಸ್ ಪಡೆ ಎಲ್ಲಾ ವಿಭಾಗಗಳನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತದೆ. ಜತೆಗೆ ದೇಶದಲ್ಲಿರುವ ಅಲ್ಪಸಂಖ್ಯಾತರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಅವಕಾಶ ಕಲ್ಪಿಸುತ್ತದೆ ಎಂದು ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜೇಂದರ್ ಮೇಘವಾರ್ ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಮಾತ್ರವಲ್ಲದೆ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ. ಅವರ ನೇಮಕವು ಪಾಕಿಸ್ತಾನದಲ್ಲಿರುವ ಹಿಂದೂ ಅಲ್ಪಸಂಖ್ಯಾತರಿಗೆ ಹೆಮ್ಮೆಯ ಕ್ಷಣವಾಗಿದೆ. ಮುಖ್ಯವಾಗಿ ಸಮುದಾಯದ ಇನ್ನಷ್ಟು ಯುವಜನರಿಗೆ ಪ್ರೇರೇಪಣೆ ನೀಡುತ್ತದೆ. ಇದು ದೇಶದ ನಾಗರಿಕ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಪಾಕಿಸ್ತಾನದ ಹಿಂದೂ ಮಂದಿರ ನಿರ್ವಹಣಾ ಸಮಿತಿಯ ಸದಸ್ಯ ಕ್ರಿಶನ್ ಶರ್ಮಾ ಹೇಳಿದ್ದಾರೆ.
ಐವರು ಹಿಂದೂ ವಿದ್ಯಾರ್ಥಿಗಳು ಉತ್ತೀರ್ಣ!
ಪ್ರತಿಷ್ಠಿತ ಕೇಂದ್ರೀಯ ಸುಪೀರಿಯರ್ ಸರ್ವೀಸಸ್ (CSS) ಪರೀಕ್ಷೆಯಲ್ಲಿ ಹಿಂದೂ ವಿದ್ಯಾರ್ಥಿಗಳಾದ ರೂಪ್ ಮತಿ ಮೇಘವಾರ್, ಪೂಜಾ ಓಡ್, ಸುನೀಲ್ ಮೇಘವಾರ್, ಜೀವನ್ ರಿಬಾರಿ ಮತ್ತು ಭೀಶಮ್ ಮೇಘವಾರ್ ಉತ್ತೀರ್ಣರಾಗಿದ್ದಾರೆ. ಇವರು ಪಾಕಿಸ್ತಾನದಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ದೇವಸ್ಥಾನದ ಪುನರ್ ನಿರ್ಮಾಣ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಬಾವೊಲಿ ಸಾಹಿಬ್ ಮಂದಿರವನ್ನು ಪಾಕಿಸ್ತಾನ ಸರ್ಕಾರ ಪುನರ್ ನಿರ್ಮಾಣ ಮಾಡಲು ತೀರ್ಮಾನಿಸಿದೆ. ಈ ದೇವಸ್ಥಾನ ಪುನರ್ ನಿರ್ಮಾಣವಾಗಬೇಕೆಂಬುದು ಇಲ್ಲಿನ ಹಿಂದೂಗಳ ಬೇಡಿಕೆಯಾಗಿತ್ತು. ಮಂದಿರದ ಪುನರ್ ನಿರ್ಮಾಣ ಕೆಲಸಕ್ಕೆ 10 ಮಿಲಿಯನ್ ಪಾಕಿಸ್ತಾನ ರೂಪಾಯಿ ಹಣವನ್ನು ಅನುದಾನದ ರೂಪದಲ್ಲಿ ಎತ್ತಿಡಲಾಗಿದೆ ಎನ್ನಲಾಗಿದೆ. ಅಂದರೆ ಪಾಕಿಸ್ತಾನದ ರೂಪಾಯಿಯ ಲೆಕ್ಕದಲ್ಲಿ 1 ಕೋಟಿ ಪಾಕಿಸ್ತಾನ ರೂ. ಅನುದಾನ ಮೀಸಲಿಟ್ಟಿದೆ. ಈ ದೇಗುಲದ ಮೊದಲ ಹಂತದ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ. ದಿ ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಕಾಮಗಾರಿಯ ಹೊಣೆ ಹೊತ್ತಿದೆ.