ಇಸ್ಲಾಮಾಬಾದ್: ಅನಗತ್ಯ ರನ್ ಕದಿಯಲು ಯತ್ನಿಸಿ ರನೌಟ್ ಆದ ಪಾಕ್ ಆರಂಭಿಕ ಆಟಗಾರ ಮೈದಾನದಲ್ಲೇ ಬ್ಯಾಟ್ (Bat) ಎಸೆದು, ಸಹ ಆಟಗಾರನ ಮೇಲೆ ಆಕ್ರೋಶ ಹೊರಹಾಕಿದ ದೃಶ್ಯ ಆಸ್ಟ್ರೇಲಿಯಾದಲ್ಲಿ ನಡೆದ ಟಾಪ್ ಎಂಡ್ ಟಿ20 ಸರಣಿ ವೇಳೆ ಕಂಡುಬಂದಿದೆ.
ಬೇಡದ ರನ್ ಕದಿಯಲು ಯತ್ನಿಸಿ ವಿಕೆಟ್ ಒಪ್ಪಿಸಿದ ಪಾಕ್ ಮತ್ತೆ ಮಕ್ಕರ್ ಆಯಿತಲ್ಲದೇ, ಇಬ್ಬರು ಆರಂಭಿಕ ಆಟಗಾರರ ನಡುವಿನ ಗೊಂದಲವನ್ನ ತೋರಿಸಿದೆ. ಈ ಕುರಿತ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸ್ಮರಣೀಯ ಜವಾದ್ರೂ ತಪ್ಪದ ಟೀಕೆ
ಹೌದು. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಾಪ್ ಎಂಡ್ ಟಿ20 ಸರಣಿಯಲ್ಲಿ ಪಾಕಿಸ್ತಾನ್ ಶಾಹೀನ್ಸ್ ತಂಡವು ಶುಭಾರಂಭ ಪಡೆದುಕೊಂಡಿದೆ. ಗುರುವಾರ (ಆ.14) ಡಾರ್ವಿನ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ಎ ವಿರುದ್ಧ 79 ರನ್‌ಗಳ ಜಯ ಸಾಧಿಸಿತು. ಯಾಸಿರ್ ಖಾನ್ , ಖವಾಜಾ ನಫಾಯ್ ಮತ್ತು ಅಬ್ದುಲ್ ಸಮದ್ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ್ ಶಾಹೀನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 227 ರನ್ ಪೇರಿಸಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 16.5 ಓವರ್‌ಗಳಲ್ಲಿ 148 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡ ಪರಿಣಾಮ ಪಾಕಿಸ್ತಾನ ಶಾಹೀನ್ಸ್ ತಂಡ 79 ರನ್‌ಗಳ ಗೆಲುವು ಸಾಧಿಸಿತು. ಪಾಕ್‌ಗೆ ಇದು ಸ್ಮರಣೀಯ ಗೆಲುವಾದ್ರೂ, ಪಂದ್ಯದಲ್ಲಿ ಮಾಡಿಕೊಂಡ ಯಡವಟ್ಟು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
ಮೊದಲು ಕ್ರೀಸ್‌ಗಿಳಿದ ಶಾಹೀನ್ಸ್ ಪರ ಯಾಸಿರ್ ಖಾನ್ ಹಾಗೂ ಖವಾಜಾ ನಫಾಯ್ ಅವರ ಆರಂಭಿಕ ಜೋಡಿ ಸ್ಫೋಟಕ ಆರಂಭ ನೀಡಿತ್ತು. 11 ಓವರ್‌ಗಳಲ್ಲಿ 118 ರನ್‌ಗಳ ಉತ್ತಮ ಜೊತೆಯಾಟ ನೀಡಿ ವಿಕೆಟ್ ಕಳೆದುಕೊಳ್ಳದೇ ಉತ್ತಮ ಸ್ಥಿತಿಯಲ್ಲಿತ್ತು. ಆದ್ರೆ ಮೃತ್ಯುಂಜಯ್ ಚೌಧರಿ ಎಸೆದ 12ನೇ ಓವರ್‌ನ ಮೊದಲ ಎಸೆತದಲ್ಲಿ ಅನಗತ್ಯ ರನ್ ಕದಿಯಲು ಯತ್ನಿಸಿ ಖವಾಜಾ ವಿಕೆಟ್ ಒಪ್ಪಿಸಿದ್ರು.
ವೇಗಿ ಮೃತ್ಯುಂಜಯ್ ಎಸೆದ ಎಸೆತವನ್ನು ಯಾಸಿರ್ ಸಿಕ್ಸರ್‌ಗೆ ಅಟ್ಟಲು ಯತ್ನಿಸಿದರು. ಆದ್ರೆ ಬಾಲ್ ಪ್ಯಾಡ್‌ಗೆ ಬಡಿದು, ಕಾಲಿಗೆ ತಾಗಿ, ತನ್ನ ಪಕ್ಕದಲ್ಲೇ ಲೆಗ್‌ಸೈಡ್‌ಗೆ ಉರುಳಿತು. ಈ ವೇಳೆ ನಫಾಯ್ ಸಿಂಗಲ್‌ಗೆ ಕರೆ ನೀಡಿದ್ರು, ಯಾಸಿರ್ ಕೂಡ ಒಂದು ಹೆಜ್ಜೆ ಮುಂದಿಟ್ಟರು. ಚೆಂಡು ಹತ್ತಿರದಲ್ಲೇ ಇದೆ ಎಂದು ಯಾಸಿರ್ ಕೈ ತೋರಿಸುವಷ್ಟರಲ್ಲಿ ನಫಾರ್ ಕ್ರೀಸ್ ಸಮೀಪಕ್ಕೆ ಬಂದಿದ್ದರು. ಪುನಃ ನಾನ್ ಸ್ಟ್ರೈಕ್‌ಗೆ ಮರಳುವಷ್ಟರಲ್ಲಿ ಕೀಪರ್ ನೂರುಲ್ ಹಸನ್ ಬೌಲರ್‌ಗೆ ಬಾಲ್ ಎಸೆದು ರನೌಟ್ ಮಾಡುವಲ್ಲಿ ಯಶಸ್ವಿಯಾದರು. ಇದರಿಂದ ಕೆರಳಿದ ನಫಾರ್ ಮೈದಾನದಲ್ಲೇ ಬ್ಯಾಟ್ ಎಸೆದು ನೀನು ಬರಬಹುದಿತ್ತು ಅಂತ ಆಕ್ರೋಶ ಹೊರಹಾಕಿದ್ರು. 21 ಸೆಕೆಂಡುಗಳ ಈ ವಿಡಿಯೋದಲ್ಲಿ ಇಬ್ಬರ ಆಟಗಾರ ನಡುವಿನ ಸಂವಹನ ಕೊರತೆಯನ್ನು ಎತ್ತಿ ತೋರಿಸಿದ್ದು, ಪಾಕ್ ಆಟಗಾರರು ಮತ್ತೊಮ್ಮೆ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ಸದ್ಯ ಪಾಕಿಸ್ತಾನ್ ಶಾಹೀನ್ಸ್ ತಂಡವು ಆಗಸ್ಟ್ 16 ರಂದು ಪರ್ತ್ ಸ್ಕಾರ್ಚರ್ಸ್ ಅಕಾಡೆಮಿ ವಿರುದ್ಧ ತನ್ನ ಮುಂದಿನ ಪಂದ್ಯವನ್ನಾಡಲಿದೆ.
For More Updates Join our WhatsApp Group :
