ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ದರ್ಶನ್ ಮತ್ತು ಗ್ಯಾಂಗ್ನವರಿಂದ ಚಿತ್ರಹಿಂಸೆಗೆ ಒಳಗಾಗಿ ಹತ್ಯೆಯಾದ ರೇಣುಕಾಸ್ವಾಮಿ ಇನ್ನಿಲ್ಲ ಎಂಬ ವಿಷಯ ಗೊತ್ತಾಗಾದ ಪತ್ನಿ, ತಾಯಿ ಮತ್ತು ತಂದೆಗೆ ಆದ ಆಘಾತ ಅಷ್ಟಿಷ್ಟಲ್ಲ. ಅಲ್ಲದೇ, ಆತನ ಶವವನ್ನು ಗುರುತಿಸುವುದು ಕೂಡ ಕಷ್ಟ ಆಗಿತ್ತು. ಅಷ್ಟರಮಟ್ಟಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ಇತ್ತೀಚೆಗೆ ದರ್ಶನ್ ಪವಿತ್ರಾ ಗೌಡ ಮತ್ತು ಇತರೆ ಪ್ರಮುಖ ಆರೋಪಿಗಳ ಜಾಮೀನು ರದ್ದಾಗಿದ್ದು, ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ.
ಅನೇಕ ನೋವಿನ ಸಂಗತಿಗಳನ್ನು ರೇಣುಕಾಸ್ವಾಮಿ ಕುಟುಂಬ ಹಂಚಿಕೊಂಡಿದೆ. ಆರಂಭದಲ್ಲಿ ರೇಣುಕಾಸ್ವಾಮಿ ಕೊಲೆಯಾಗಿರುವ ವಿಷಯ ಆತನ ಪತ್ನಿ ಸಹನಾಗೆ ತಿಳಿದಿರಲಿಲ್ಲ. ಗರ್ಭಿಣಿ ಆಗಿದ್ದರಿಂದ ಅವರಿಂದ ವಿಷಯವನ್ನು ಮುಚ್ಚಿಡಲಾಗಿತ್ತು. ಏನೋ ಜಗಳ ಆಗಿದೆ ಎಂಬುದನ್ನಷ್ಟೇ ಹೇಳಲಾಗಿತ್ತು. ‘ಹೇಗಾದರೂ ಮಾಡಿ ಅವರ ಜೀವವನ್ನು ಉಳಿಸಿ. ಕೈ, ಕಾಲು ಹೋಗಿದ್ದರೂ ಚಿಂತೆಯಿಲ್ಲ. ನಾನು ಅವರ ಆರೈಕೆ ಮಾಡುತ್ತೇನೆ. ಕರೆದುಕೊಂಡ ಬನ್ನಿ’ ಎಂದು ಪತ್ನಿ ಸಹನಾ ಕಣ್ನೀರು ಹಾಕಿದ್ದರು.
ರೇಣುಕಾಸ್ವಾಮಿ ಹತ್ಯೆ ನಡೆದಾಗ ರೇಣುಕಾಸ್ವಾಮಿ ಪತ್ನಿ 5 ತಿಂಗಳ ಗರ್ಭಿಣಿ ಆಗಿದ್ದರು. ಆ ದಿನವನ್ನು ರೇಣುಕಾಸ್ವಾಮಿ ತಂದೆ-ತಾಯಿ ನೆನಪಿಸಿಕೊಂಡಿದ್ದಾರೆ. ‘ಕರೆದುಕೊಂಡು ಬರುತ್ತೇನೆ ಅಂತ ಸೊಸೆಗೆ ಹೇಳಿದ್ದೆವು. ಆದರೆ ಹೆಣವಾಗಿ ಕರೆದುಕೊಂಡು ಬರುತ್ತೇವೆ ಅಂತ ನಾವು ಹೇಳಿರಲಿಲ್ಲ. ಆ ಸಮಯದಲ್ಲಿ ನಾವು ಹೇಳುವಂತಿರಲಿಲ್ಲ. ನಂತರ ಹೇಗೋ ಆಕೆಗೆ ಗೊತ್ತಾಯಿತು. ಪೊಲೀಸರು, ಮಾಧ್ಯಮದವರು ಮನೆ ಬಳಿ ಬಂದರು’ ಎಂದು ಅವರು ಹೇಳಿದ್ದಾರೆ.
‘ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಬಾಡಿ ಕೊಡಲು ಸಹಿ ಮಾಡಿಸಿಕೊಂಡರು. ಮೊದಲಿಗೆ ಗುರುತು ಹಿಡಿಯಲು ಆಗಲಿಲ್ಲ. ಬಾಯಿ, ತುಟಿಯನ್ನು ನಾಯಿ ತಿಂದಿತ್ತು. ಮುಖದಿಂದ ಹಿಡಿದ ಎಲ್ಲ ಭಾಗಕ್ಕೂ ಹೊಡದು ಗಾಯ ಮಾಡಿದ್ದರು. ದೇಹ ಊದಿಕೊಂಡಿತ್ತು. ಚಡ್ಡಿ, ವೇಷ-ಭೂಷಣ ನೋಡಿ ಅವನೇ ನಮ್ಮ ಮಗ ಅಂತ ಗೊತ್ತಾಯಿತು. ಅಷ್ಟರಮಟ್ಟಿಗೆ ವಿಕಾರ ಆಗಿತ್ತು’ ಎಂದಿದ್ದಾರೆ ರೇಣುಕಾಸ್ವಾಮಿ ಪೋಷಕರು.
‘ಮಗ ಮಾಡಿದ ತಪ್ಪನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ತಪ್ಪಿನ ಪ್ರಮಾಣದಲ್ಲೇ ಶಿಕ್ಷೆ ನೀಡಬೇಕಿತ್ತು. ಆಕೆ (ಪವಿತ್ರಾ ಗೌಡ) ಬ್ಲಾಕ್ ಮಾಡಬಹುದಿತ್ತು. ಪೊಲೀಸರಿಗೆ ಕರೆ ಮಾಡಿ ಹೇಳಬಹುದಿತ್ತು. ಅವರು ಅಷ್ಟು ದೊಡ್ಡ ವ್ಯಕ್ತಿಯಲ್ಲವೇ? ಪ್ರಾಣ ತೆಗೆಯುವಂತಹ ಕೆಲಸಕ್ಕೆ ಮುಂದಾಗಬಾರದಿತ್ತು. 8-10 ಜನರು ಸೇರಿಕೊಂಡು ಕೊಲ್ಲಬೇಕಿತ್ತಾ?’ ಎಂದು ಕಣ್ಣೀರು ಹಾಕಿದ್ದಾರೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ..
For More Updates Join our WhatsApp Group :