ಉಡುಪಿ ಶ್ರೀಕೃಷ್ಣ ಮಠಕ್ಕೆ ಜ್ಯೂ.NTR, ರಿಷಬ್ ಶೆಟ್ಟಿ ಭೇಟಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ಜ್ಯೂ.ಎನ್‌ಟಿಆರ್, ರಿಷಬ್ ಶೆಟ್ಟಿ ಭೇಟಿ

ಉಡುಪಿ: ನಟರಾದ ಜ್ಯೂ.ಎನ್‌ಟಿಆರ್ (Junior NTR) ಮತ್ತು ರಿಷಬ್ ಶೆಟ್ಟಿ (Rishab Shetty) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು

ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟ ಜ್ಯೂ.ಎನ್‌ಟಿಆರ್, ಕೃಷ್ಣ, ಮುಖ್ಯಪ್ರಾಣ ದೇವರ ದರ್ಶನ ಪಡೆದರು. ಈ ವೇಳೆ ನಟ ರಿಷಬ್ ಶೆಟ್ಟಿ ಹಾಗೂ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗಿದ್ದರು. ಸ್ಟಾರ್ ನಟರು ಶ್ರಾವಣ ಮಾಸದ ಶನಿವಾರದಂದು ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣ, ಮುಖ್ಯಪ್ರಾಣ, ಗರುಡ ದೇವರ ದರ್ಶನ ಪಡೆದರು

ದೇವರ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಕನ್ನಡದಲ್ಲೇ ಮಾತನಾಡಿದ ಜ್ಯೂ.ಎನ್‌ಟಿಆರ್, ಎಲ್ಲವೂ ಭಗವಾನ್ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ. 40 ವರ್ಷದಿಂದ ನನ್ನ ಅಮ್ಮನಿಗೆ ಒಂದು ಆಸೆ ಇತ್ತು. ಮಗನನ್ನೊಮ್ಮೆ ಕೃಷ್ಣ ಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇವತ್ತು ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ.

ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟ ದೇವರು ಕೊಟ್ಟ ಗೆಳೆಯ. ರಿಷಬ್ ಜೊತೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ ಎಂದು ಖುಷಿ ಹಂಚಿಕೊಂಡರು.

ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಃಶಾಂತಿ ಸಿಕ್ಕಿದೆ. ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ. ನಾನು ಮನೆಯಲ್ಲಿ ಪ್ರತಿದಿನ ಉಡುಪಿ ಊಟ ಮಾಡುತ್ತೇನೆ. ಕೃಷ್ಣಮಠದಲ್ಲಿ ಮಾಡುವ ಊಟವನ್ನು ನಾನು ಪ್ರತಿದಿನ ಮನೆಯಲ್ಲೇ ಮಾಡುತ್ತೇನೆ. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ರಿಷಬ್‌ಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿ. ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ ಎಂದು ಅಭಿನಂದಿಸಿದರು

Leave a Reply

Your email address will not be published. Required fields are marked *