ಬೆಂಗಳೂರು: ಜೈಲಿನಲ್ಲಿ ಕೈದಿಗಳು ಮದ್ಯದ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಕೈದಿಗಳಿಗೆ ಜೈಲಿನ ರಾಜಾತಿಥ್ಯ ಮುಂದುವರಿದಿದೆ ಎಂಬುದಕ್ಕೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಇತ್ತು. ಈ ವಿಡಿಯೋನ ಲೀಕ್ ಮಾಡಿದ ಆರೋಪವನ್ನು ನಟ ಹಾಗೂ ದರ್ಶನ್ ಆಪ್ತ ಧನ್ವೀರ್ ಮೇಲೆ ಹೊರಿಸಲಾಗಿದೆ. ಈ ಪ್ರಕರಣದ ವಿಚಾರಣೆ ಮಾಡುವಾಗ ಧನ್ವೀರ್ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೆಸರನ್ನು ಹೇಳಿದ್ದಾರೆ. ಈಗ ಈ ಪ್ರಕರಣದಲ್ಲಿ ವಿಜಯಲಕ್ಷ್ಮೀ ಅವರು ತನಿಖೆ ಎದುರಿಸೋ ಸಾಧ್ಯತೆ ಇದೆ.
ಈ ಮೊದಲು ಧನ್ವೀರ್ ಅವರು ವಿಚಾರಣೆ ಎದುರಿಸಿದ್ದರು. ಈ ವೇಳೆ ಅವರು ಯಾವುದೇ ವಿಷಯ ಬಾಯ್ಬಿಟ್ಟಿರಲಿಲ್ಲ. ಇದಾದ ಬಳಿಕ ಮತ್ತೆ ಅವರಿಗೆ ನೋಟಿಸ್ ನೀಡಲಾಯಿತು. ಎರಡನೇ ಬಾರಿಗೆ ಧನ್ವೀರ್ ಅವರು ಪೊಲೀಸರ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಹಲವು ವಿಷಯಗಳನ್ನು ರಿವೀಲ್ ಮಾಡಿದ್ದಾರೆ ಎನ್ನಲಾಗಿದೆ. ವಿಡಿಯೋ ಕಳುಹಿಸಿದ್ದು ಯಾರು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ.
ಧನ್ವೀರ್ಗೆ ಈ ವಿಡಿಯೋ ಸಿಕ್ಕಿದ್ದು ವಕೀಲರಿಂದ. ನಂತರ ಈ ವಿಡಿಯೋನ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕಳುಹಿಸಿದ್ದಾರೆ. ಇದನ್ನು ವಿಚಾರಣೆ ವೇಳೆ ಹೇಳಿದ್ದಾರೆ. ‘ನಾನು ವೀಡಿಯೋ ವೈರಲ್ ಮಾಡಿಲ್ಲ. ಈ ವಿಡಿಯೋ ಹೇಗೆ ವೈರಲ್ ಆಗಿದೆ ಅನ್ನೋದು ಗೊತ್ತಿಲ್ಲ. ನಾನು ವಿಜಯಲಕ್ಷ್ಮೀ ಅವರಿಗೆ ವಿಡಿಯೋನ ಫಾರ್ವರ್ಡ್ ಮಾಡಿದ್ದೆ’ ಎಂದು ಧನ್ವೀರ್ ಮಾಹಿತಿ ನೀಡಿದ್ದಾರೆ.
ವಿಜಯಲಕ್ಷ್ಮೀ ಹೆಸರು ಹೇಳುತ್ತಿದ್ದಂತೆ ಈ ವಿಷಯವನ್ನು ತನಿಖಾಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಜಯಲಕ್ಷೀ ಅವರನ್ನು ವಿಚಾರಣೆಗೆ ಕರೆಸೋ ಬಗ್ಗೆ ಚರ್ಚೆ ನಡೆದಿದೆ. ಒಂದೊಮ್ಮೆ ಧನ್ವೀರ್ ಅವರು ವಿಚಾರಣೆಗೆ ಸರಿಯಾಗಿ ಸ್ಪಂದಿಸದೇ ಇದ್ದರೆ ವಿಜಯಲಕ್ಷ್ಮೀ ಅವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.
For More Updates Join our WhatsApp Group :

