ಹೊಯ್ಸಳರ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಭಕ್ತರ ಆಕರ್ಷಿಸುತ್ತಿರುವ ಜೈನರಗುತ್ತಿ.

ಹೊಯ್ಸಳರ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಭಕ್ತರ ಆಕರ್ಷಿಸುತ್ತಿರುವ ಜೈನರಗುತ್ತಿ.

ಹೊಯ್ಸಳರ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಹಳೇಬೀಡು, ಮಾದಿಹಳ್ಳಿ ಹೋಬಳಿಯ ಜೈನರ ಗುತ್ತಿ ಕ್ಷೇತ್ರ ರಾಷ್ಟ್ರವ್ಯಾಪಿಯಾಗಿ ಬೆಳೆಯುತ್ತಿದೆ. ಜೈನರ ಗುತ್ತಿ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡಿರುವ 24 ಅಡಿ ಎತ್ತರದ ಪದ್ಮಾಸನ ಭಂಗಿಯ ಶೀತಲನಾಥ ತೀರ್ಥಂಕರ ಮೂರ್ತಿ ಹಾಗೂ 31 ಅಡಿ ಎತ್ತರದ ಮುನಿಸುವ್ರತ ತೀರ್ಥಂಕರರ ಮೂರ್ತಿಗಳು ದೂರದ ಭಕ್ತರನ್ನು ಸೆಳೆಯುತ್ತಿವೆ.

ಶಿವಪುರ ಕಾವಲಿನಲ್ಲಿರುವ ಜೈನರ ಗುತ್ತಿ ಐತಿಹಾಸಿಕ ನಿಸರ್ಗ ರಮಣೀಯ ತಾಣವಾಗಿದ್ದು, ಕರ್ನಾಟಕವಲ್ಲದೇ, ಉತ್ತರ ಭಾರತದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಜಿನ ಮಂದಿರದ 24 ತೀರ್ಥಂಕರರು ಹಾಗೂ ಪದ್ಮಾವತಿ ದರ್ಶನ ಮಾಡಿ ಹೊರಬಂದಾಗ ಮುನಿಸುವ್ರತ ತೀರ್ಥಂಕರ ಹಾಗೂ ಶೀತಲನಾಥ ತೀರ್ಥಂಕರರ ಮೂರ್ತಿ ದರ್ಶನ ಪಡೆದು, ಮನಸ್ಸು ಪ್ರಫುಲ್ಲವಾಗುತ್ತದೆ ಎಂಬ ಮಾತು ಭಕ್ತರಿಂದ ಕೇಳಿ ಬರುತ್ತಿದೆ.

‘2,500 ಕಿ.ಮೀ ದೂರದ ರಾಜಸ್ಥಾನದ ಜೈಪುರದಿಂದ ಶಿಲಾಮೂರ್ತಿಯನ್ನು ಸುರಕ್ಷಿತವಾಗಿ ತಂದು ಪ್ರತಿಷ್ಠಾಪಿಸಲಾಗಿದೆ. ಛತ್ತೀಸಗಡದ ದುರ್ಗಾ ನಿವಾಸಿಗಳಾದ ದೇವೇಂದ್ರ ಕುಮಾರ್ ಜೈನ್, ಬಿನಾದೇವಿ ಕಲಾ ಪರಿವಾರದವರು ಮೂರ್ತಿಯನ್ನು ಕೆತ್ತನೆ ಮಾಡಿಸಿದ್ದಾರೆ. ಜಿನಮೂರ್ತಿ ಎಂಥವರನ್ನು ಸೆಳೆಯುವಂತಿದೆ’ ಎಂದು ಅಡಗೂರಿನ ಧಾವನ್ ಜೈನ್ ಹೇಳುತ್ತಾರೆ.

ಭೂಮಿಯಲ್ಲಿ ದೊರೆತ ಮೂರ್ತಿಗಳು: ಜೈನರಗುತ್ತಿಯಲ್ಲಿ ಭೂ ಪ್ರದೇಶವನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ ಶಿಲಾಮೂರ್ತಿಗಳ ತಲೆಯ ಭಾಗ ಗೋಚರಿಸಿತು. ವಿವಿಧ ಸ್ಥಳದಲ್ಲಿ ಮಣ್ಣನ್ನು ಬಗೆದ ಪರಿಣಾಮ, ಯಕ್ಷಿ, ಪದ್ಮಾವತಿ ಸೇರಿದಂತೆ 9 ಜಿನಮೂರ್ತಿಗಳು ದೊರಕಿವೆ. ಭೂಮಿಯಲ್ಲಿ ದೊರೆತ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತಿದೆ.

ಜೈನ ಮುನಿಗಳಿಂದ ಕ್ಷೇತ್ರದ ಪ್ರಗತಿ: ದಿಗಂಬರ ಜೈನ ಮುನಿ ವೀರಸಾಗರ ಮಹಾರಾಜರು ಆಗಾಗ್ಗೆ ವಿಹಾರ ಮಾಡಿಕೊಂಡು ಜೈನರಗುತ್ತಿಯಲ್ಲಿ ವಾಸ್ತವ್ಯ ಮಾಡಿದರು. ಜಿನ ಭಕ್ತರಿಗೆ ಕ್ಷೇತ್ರ ಅಭಿವೃದ್ಧಿ ಕುರಿತು ಸಲಹೆ ಸೂಚನೆ ನೀಡಿದರು.

ಶ್ರವಣಬೆಳಗೊಳದ ಮಸ್ತಕಾಭಿಷೇಕಕ್ಕೆ ಬಂದಿದ್ದ ಮುನಿಗಳು, ಜೈನರಗುತ್ತಿ ಸಂದರ್ಶಿಸಿ ವಿಹಾರ ಮುಂದುವರಿಸಿದರು. ಆಚಾರ್ಯರಾದ ಚಂದ್ರಪ್ರಭ ಮಹಾರಾಜರು, ವಿಶುದ್ಧ ಸಾಗರ ಮಹಾರಾಜರು, ಸಿದ್ದಸೇನ ಮಹಾರಾಜರು, ಪುಷ್ಪದಂತ ಮಹಾರಾಜರು, ಸಂಘ ಪರವಾರದೊಂದಿಗೆ ಜೈನರ ಗುತ್ತಿಗೆ ಭೇಟಿ ಕೊಟ್ಟ ನಂತರ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಯಿತು ಎಂದು ಹೊಂಗೇರಿ ದೇವೇಂದ್ರ ಹೇಳುತ್ತಾರೆ.

ಜೈನರ ಗುತ್ತಿ ಸಾಮಾನ್ಯ ಕ್ಷೇತ್ರವಲ್ಲ ಹೊಯ್ಸಳ ಅರಸರ ಕಷ್ಟ ಪರಿಹರಿಸಿ ಸಾಮ್ರಾಜ್ಯ ಉಳಿಸಿದ ಸ್ಥಳ. ಉತ್ತರ ಭಾರತದ ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವೀರಸಾಗರ ಮುನಿ ಮಹಾರಾಜ ಜಿನ ಧರ್ಮ ಪ್ರಭಾವಕ ಆಮೆ ಮಂದಿರ ನಿರ್ಮಾಣ

ಎತ್ತರದ ಕಾಂಕ್ರೀಟ್ ಸ್ತಂಭದ ಮೇಲೆ 31 ಅಡಿ ಎತ್ತರದ ಮುನಿಸುವ್ರತ ತೀರ್ಥಂಕರರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ತೀರ್ಥಂಕರ ಮೂರ್ತಿಯ ಕೆಳ ಭಾಗದಲ್ಲಿ ಆಮೆ ಆಕೃತಿಯ ಜಿನ ಮಂದಿರ ನಿರ್ಮಾಣ ಮಾಡಲು ಅಡಿಪಾಯ ಹಾಕಲಾಗಿದೆ. ಈ ಮಂದಿರದಲ್ಲಿ 3 ಅಡಿ ಎತ್ತರದ 24 ತೀರ್ಥಂಕರರ ಮೂರ್ತಿ ಪ್ರತಿಷ್ಠಾಪಿಸಿ ಮಧ್ಯದಲ್ಲಿ ಸಹಸ್ತ್ರಕೂಟ ಸ್ಥಾಪಿಸಲಾಗುವುದು. ಆಮೆ ಜಿನಮಂದಿರ ಪ್ರವೇಶಿಸಿ ತೀರ್ಥಂಕರ ದರ್ಶನ ಮಾಡಿದ ನಂತರ ಮೇಲ್ಭಾಗದ ಮುನಿಸುವ್ರತ ತೀರ್ಥಂಕರರ ದರ್ಶನ ಮಾಡುವ ವ್ಯವಸ್ಥೆ ಮಾಡಲಾಗುವುದು. ದಾನಿಗಳ ಸಹಕಾರದಿಂದ ಮಂದಿರ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿನಧರ್ಮ ಪ್ರಭಾವಕ ದಿಗಂಬರ ಜೈನಮುನಿ ವೀರಸಾಗರ ಮುನಿ ಮಹಾರಾಜ್ ಹೇಳಿದರು. – ಕ್ಷೇತ್ರದ ಇತಿಹಾಸ

ಜೈನರ ಗುತ್ತಿ ಸ್ಥಳದಲ್ಲಿರುವ ರಾಶಿಗುಡ್ಡದಲ್ಲಿ ಜ್ವಾಲಮುಖಿ ಸಂಭವಿಸಿ ಭೂಮಿ ಬಿರುಕು ಬಿಡುತ್ತಿತ್ತು. ಹೊಯ್ಸಳರ ದೊರೆ ಬಲ್ಲಾಳರಾಯ ಏನೆಲ್ಲ ಪ್ರಯತ್ನ ನಡೆಸಿದರೂ ಭೂಮಿಯ ಬಿರುಕು ನಿಲ್ಲಲಿಲ್ಲ. ಶ್ರವಣಬೆಳಗೊಳ ಚಾರುಕೀರ್ತಿ ಪೀಠದ ಸ್ವಾಮೀಜಿ ಕೂಷ್ಮಾಂಡಿನಿ ಮೂರ್ತಿಯನ್ನು ಆನೆಯ ಮೇಲೆ ಆರೋಹಣ ಮಾಡಿಕೊಂಡು ರಾಶಿಗುಡ್ಡದ ತಪ್ಪಲಿಗೆ ಬಂದು ಪುರೋಹಿತರ ಮಂತ್ರ ಘೋಷದೊಂದಿಗೆ ವಿವಿಧ ಆರಾಧನೆಗಳನ್ನು ನಡೆಸಿದರು. ಭೂಮಿ ಬಿರುಕಿಗೆ ಸ್ವಾಮೀಜಿ ಕುಂಬಳಕಾಯಿಗಳನ್ನು ಸಮರ್ಪಿಸಿದ ನಂತರ ಭೂಮಿಯ ಬಿರುಕು ನಿಂತಿತು. ಸಾಮ್ರಾಜ್ಯ ಉಳಿಯಿತು ಎಂದು ಸಂತೃಪ್ತನಾದ ರಾಜ ಶ್ರವಣಬೆಳಗೊಳದ ಮಠಾಧೀಶರಿಗೆ ‘ಬಲ್ಲಾಳರಾಯ ಜೀವ ರಕ್ಷಾ ಪರಿಪಾಲಕ’ ಎಂದು ಬಿರುದು ಕೊಟ್ಟನು ಎಂಬುದು ದೇವಚಂದ್ರನ ರಾಜಾವಳಿ ಕಥಾಸಾರ ಗ್ರಂಥದಲ್ಲಿ ಉಲ್ಲೇಖವಾಗಿದೆ ಎನ್ನುತ್ತಾರೆ ಅಡಗೂರಿನ ರವಿಕುಮಾರ್

Leave a Reply

Your email address will not be published. Required fields are marked *