ಜಾರ್ಖಂಡ್ : ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಬಂಧವೇ ಹಾಗೇ, ಈ ಮೂಕ ಪ್ರಾಣಿಗಳು ಮಾನವನ ಭಾವನೆಗೆ ಮಿಡಿಯುತ್ತವೆ. ಇತ್ತ ಮನುಷ್ಯರು ಕೂಡ ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸಿ ಹೃದಯಶ್ರೀಮಂತಿಕೆ ಮೆರೆದಿರುವ ಘಟನೆಗಳು ಈ ಹಿಂದೆ ನಡೆದಿದೆ. ಇದೀಗ ರೈಲು ಹಳಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಲು ಎರಡು ಗಂಟೆಗಳ ಸ್ಥಗಿತಗೊಳಿಸಿದ ಘಟನೆಯೂ ಜಾರ್ಖಂಡ್ನ ರಾಮಗಢದಲ್ಲಿ ನಡೆದಿದೆ. ಈ ವಿಡಿಯೋವೊಂದು ಮಾನವೀಯತೆಗೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ದೃಶ್ಯ ನೋಡಿದ ಬಳಕೆದಾರರು ರೈಲ್ವೆ ಅಧಿಕಾರಿಗಳ ಈ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ರಾಮಗಢದ ವಿಭಾಗೀಯ ಅರಣ್ಯ ಅಧಿಕಾರಿ ನಿತೀಶ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಜೂನ್ 25 ರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಗರ್ಭಿಣಿ ಹೆಣ್ಣು ಆನೆ ಹೆರಿಗೆ ನೋವಿನಿಂದ ಹಳಿಗಳ ಮೇಲೆ ಮಲಗಿದೆ ಎನ್ನುವ ಮಾಹಿತಿ ಬಂದಿತು. ಆದರೆ ಈ ಆನೆಯೂ ರೈಲಿಗೆ ಸಿಲುಕಬಹುದು, ಹೀಗಾಗಿ ದಯವಿಟ್ಟು ಮಾರ್ಗದಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ನಿಲ್ಲಿಸುವಂತೆ ನನ್ನನ್ನು ಕೇಳಿಕೊಂಡರು ಎಂದಿದ್ದಾರೆ.

ಈ ಮಾಹಿತಿ ಬಂದ ತಕ್ಷಣವೇ ಅರಣ್ಯ ಅಧಿಕಾರಿ ನಿತೀಶ್ ಕುಮಾರ್ ಬರ್ಕಕಾನಾದಲ್ಲಿರುವ ರೈಲ್ವೆ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಆ ಕೂಡಲೇ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಆನೆಯೂ ಮರಿಗೆ ಜನ್ಮ ನೀಡುವ ಸಲುವಾಗಿ ಎರಡು ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.