ಜಾರ್ಖಂಡ್ ||  ಮದುವೆಗೂ ಮುನ್ನ ಯುವತಿ ಮೇಲೆ ಪೆಟ್ರೋಲ್ ದಾಳಿ, ಕಣ್ಣಿಗೆ ಗಾಯ.

ಜಾರ್ಖಂಡ್ : ಮದುವೆಗೂ ಮುನ್ನ ಯುವತಿಯ ಮನೆಗೆ ನುಗ್ಗಿ ದುಷ್ಕರ್ಮಿಗಳು ಆಕೆಯ ಮೇಲೆ ಪೆಟ್ರೋಲ್ ದಾಳಿ ನಡೆಸಿರುವ ಘಟನೆ ಜಾರ್ಖಂಡ್ನ ರಾಂಚಿಯಲ್ಲಿ ನಡೆದಿದೆ. ಘಟನೆಯಲ್ಲಿ ಯುವತಿಗೆ ಕಣ್ಣುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಶನಿವಾರ ಮಧ್ಯಾಹ್ನ ನಾಲ್ವರು ಅಪರಿಚಿತ ವ್ಯಕ್ತಿಗಳು ಯುವತಿ ಮನೆಗೆ ನುಗ್ಗಿದ್ದರು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾಂಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತೆಂಡಾರ್ಟೋಲಾ ಗ್ರಾಮದಲ್ಲಿರುವ ಯುವತಿ ಮನೆಯಲ್ಲಿ ನಡೆದಿದೆ.

ನಾಲ್ವರು ವ್ಯಕ್ತಿಗಳು ಮನೆಗೆ ನುಗ್ಗಿ ಯುವತಿಯ ಮೇಲೆ ಪೆಟ್ರೋಲ್ ಸುರಿದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಆಕೆಯ ಕುಟುಂಬ ಸದಸ್ಯರು ತಕ್ಷಣ ಕಶ್ಯಪ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆರಂಭಿಕ ವರದಿಯಲ್ಲಿ ಇದೊಂದು ಆ್ಯಸಿಡ್ ದಾಳಿ ಎಂದು ಹೇಳಲಾಗಿತ್ತು. ಆದರೆ ಪರೀಕ್ಷೆ ಬಳಿಕ ಅದು ಪೆಟ್ರೋಲ್ ಎಂಬುದು ತಿಳಿದುಬಂದಿದೆ. ಆಕೆಯ ಕಣ್ಣುಗಳಿಗೆ ಗಾಯಗಳಾಗಿದ್ದು, ಕಾರ್ನಿಯಾದ ಹೊರ ಪದರಕ್ಕೆ ಮಾತ್ರ ಹಾನಿಯಾಗಿದೆ. ಒಂದೆರಡು ದಿನಗಳಲ್ಲಿ ಆಕೆ ಚೇತರಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಗಾಯಗಳು ಗಂಭೀರವಾಗಿಲ್ಲ ಮತ್ತು ತನಿಖೆಯನ್ನು ತಾವೇ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದಷ್ಟು ಬೇಗ ಬಂಧನಗಳನ್ನು ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ರಾಂಚಿ ಪೊಲೀಸರಿಗೆ ಈ ವಿಷಯದ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ನಿರ್ದೇಶನ ನೀಡಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂತ್ರಸ್ತೆಗೆ ಸೂಕ್ತ ವೈದ್ಯಕೀಯ ಆರೈಕೆ ಒದಗಿಸುವಂತೆ ಮತ್ತು ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *