ಕೋಲ್ಕತ್ತಾ: ಆರ್ ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಹತ್ಯೆ, ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ನಡುಸುತ್ತಿದ್ದ ನಿರಶನವನ್ನು ಕಿರಿಯ ವೈದ್ಯರು ಹಿಂಪಡೆದಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಿರಶನ ನಿರತ ಕಿರಿಯ ವೈದ್ಯರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಬೆನ್ನಲ್ಲೇ ಕಿರಿಯ ವೈದ್ಯರು ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.
ವೈದ್ಯಾಧಿಕಾರಿಗಳು ಮಂಗಳವಾರ ರಾಜ್ಯದ ಆಸ್ಪತ್ರೆಗಳಾದ್ಯಂತ ತಮ್ಮ ಉದ್ದೇಶಿತ ಮುಷ್ಕರವನ್ನೂ ಹಿಂತೆಗೆದುಕೊಂಡಿದ್ದಾರೆ. “ಇಂದಿನ (ಸಿಎಂ ಜೊತೆ) ಸಭೆಯಲ್ಲಿ ನಮಗೆ ಕೆಲವು ನಿರ್ದೇಶನಗಳ ಭರವಸೆ ಸಿಕ್ಕಿತು, ಆದರೆ ರಾಜ್ಯ ಸರ್ಕಾರದ ವರ್ತನೆ ಸಕಾರಾತ್ಮಕವಾಗಿಲ್ಲ, ಸಾಮಾನ್ಯ ಜನರು ನಮ್ಮನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ ಎಂದು ನಿರಶನ ನಿರತ ವೈದ್ಯರು ಹೇಳಿದ್ದಾರೆ.
ಅವರು ಮತ್ತು ನಮ್ಮ ಮೃತ ಸಹೋದರಿಯ (ಆರ್ಜಿ ಕಾರ್ ಆಸ್ಪತ್ರೆ ಸಂತ್ರಸ್ತೆ) ಪೋಷಕರು ಹದಗೆಡುತ್ತಿದ್ದ ನಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ವಿನಂತಿಸುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ‘ಆಮರಣಾಂತ ಉಪವಾಸ’ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಂಗಳವಾರದ ಸಂಪೂರ್ಣ ಸ್ಥಗಿತವನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ” ಎಂದು ಕಿರಿಯ ವೈದ್ಯರಲ್ಲಿ ಒಬ್ಬರಾದ ದೇಬಾಶಿಶ್ ಹಲ್ಡರ್ ಹೇಳಿದರು.
ವೈದ್ಯರ ಸಾಮಾನ್ಯ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಧರಣಿ ನಿರತ ಕಿರಿಯ ವೈದ್ಯರ ನಡುವೆ ಸೋಮವಾರ ಸಂಜೆ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಯಿತು.