ಒಪ್ಪಂದ ಮುರಿದ ಕಮಲ್ ಹಾಸನ್, ಮುಂಚಿತವಾಗಿ ಒಟಿಟಿಗೆ ಬಂತು ‘Thug Life’..!

ಒಪ್ಪಂದ ಮುರಿದ ಕಮಲ್ ಹಾಸನ್, ಮುಂಚಿತವಾಗಿ ಒಟಿಟಿಗೆ ಬಂತು ‘Thug Life’..!

ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಜೂನ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆಗ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಸೋಲನ್ನು ಸಿನಿಮಾ ಕಂಡಿತು. ಆ ಬಳಿಕ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಗೊಂದಲಗಳು ಉಂಟಾದವು. ಇದೀಗ ಒಪ್ಪಂದವನ್ನು ಮುರಿದು ನಿಗದಿತ ಅವಧಿಗೆ ಮುಂಚಿತವಾಗಿಯೇ ‘ಥಗ್ ಲೈಫ್’ ಸಿನಿಮಾ ಅನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಜೂನ್ 5 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ವಿವಾದದಿಂದಲೇ ಹೆಚ್ಚು ಸುದ್ದಿಯಾಗಿತ್ತು. ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಕಮಲ್ ಹಾಸನ್, ಕನ್ನಡ ಭಾಷೆಯ ಬಗ್ಗೆ ಆಡಿದ ಮಾತಿಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕದಲ್ಲಿ ಸಿನಿಮಾ ಅನ್ನು ನಿಷೇಧಿಸಲಾಗಿತ್ತು. ಅದರ ಬೆನ್ನಲ್ಲೆ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿತು. ಈ ವರ್ಷದ ಈ ವರೆಗಿನ ಅತ್ಯಂತ ಹೀನಾಯವಾಗಿ ಸೋತ ಸ್ಟಾರ್ ಸಿನಿಮಾ ಎಂಬ ಕುಖ್ಯಾತಿಗೆ ‘ಥಗ್ ಲೈಫ್’ ಪಾತ್ರವಾಗಿದೆ. ಇದೀಗ ಈ ಸಿನಿಮಾ ತುಸುವೂ ಸದ್ದಿಲ್ಲದೆ ಒಟಿಟಿಯಲ್ಲಿ ಬಿಡುಗಡೆ ಆಗಿದೆ.

‘ಥಗ್ ಲೈಫ್’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಮುನ್ನವೇ ಒಟಿಟಿಗೆ ಮಾರಾಟವಾಗಿತ್ತು. ನೆಟ್ಫ್ಲಿಕ್ಸ್, ಬರೋಬ್ಬರಿ 110 ಕೋಟಿ ರೂಪಾಯಿ ಹಣ ನೀಡಿ ‘ಥಗ್ ಲೈಫ್’ ಸಿನಿಮಾ ಖರೀದಿ ಮಾಡಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧಾರುಣವಾಗಿ ಸೋತ ಕಾರಣ ನೆಟ್ಫ್ಲಿಕ್ಸ್, ‘ಥಗ್ ಲೈಫ್’ ನಿರ್ಮಾಪಕರಾದ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರೊಟ್ಟಿಗೆ ಚರ್ಚೆಗೆ ಕೂತು, ಸಿನಿಮಾದ ಒಪ್ಪಂದದಲ್ಲಿ ಬದಲಾವಣೆಗೆ ಮುಂದಾಗಿತ್ತು.

ಮೂಲ ಒಪ್ಪಂದದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆದ ಎಂಟು ವಾರಗಳ ಬಳಿಕವಷ್ಟೆ ಆ ಸಿನಿಮಾ ಒಟಿಟಿಗೆ ಬರಬೇಕಿತ್ತು. ಆದರೆ ಚಿತ್ರಮಂದಿರದಲ್ಲಿ ಹೀನಾಯ ಸೋಲು ಕಂಡ ಕಾರಣ, ಸಿನಿಮಾವನ್ನು ಬೇಗನೆ ಒಟಿಟಿಗೆ ಬಿಡುಗಡೆ ಮಾಡಲು ನೆಟ್ಫ್ಲಿಕ್ಸ್ ನಿರ್ಮಾಪಕರ ಮೇಲೆ ಒತ್ತಡ ಹೇರಿತು. ಇಲ್ಲವಾದರೆ ಒಪ್ಪಂದದಲ್ಲಿರುವಂತೆ 110 ಕೋಟಿ ಹಣದ ಬದಲಾಗಿ ಕಡಿಮೆ ಹಣ ನೀಡುವುದಾಗಿ ಹೇಳಿತ್ತು. ಇದೀಗ ಒಟಿಟಿಯ ಒತ್ತಡಕ್ಕೆ ಮಣಿದಿರುವ ‘ಥಗ್ ಲೈಫ್’ ನಿರ್ಮಾಪಕರು, ಎಂಟು ವಾರಕ್ಕೆ ಮುಂಚೆಯೇ ‘ಥಗ್ ಲೈಫ್’ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಿದ್ದಾರೆ. ‘ಥಗ್ ಲೈಫ್’ ಸಿನಿಮಾವನ್ನು ಎಂಟು ವಾರಕ್ಕೆ ಮುಂಚಿತವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ, ನಷ್ಟ ತುಂಬಿಕೊಡಬೇಕು ಎಂದು ಮಲ್ಟಿಪ್ಲೆಕ್ಸ್ಗಳು ನಿರ್ಮಾಪಕರಿಗೆ ನೊಟೀಸ್ ಕಳಿಸಿತ್ತು. ಆದರೆ ಅದನ್ನು ನಿರ್ಲಕ್ಷಿಸಿ ಇದೀಗ ಅವಧಿಗೆ ಮುಂಚಿತವಾಗಿ ಒಟಿಟಿಗೆ ಬಿಡುಗಡೆ ಮಾಡಲಾಗಿದೆ.

Leave a Reply

Your email address will not be published. Required fields are marked *