ದಕ್ಷಿಣ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಮುಖ್ಯಭೂಮಿಕೆಯ ಬಹು ನಿರೀಕ್ಷಿತ ಚಿತ್ರ ‘ಥಗ್ ಲೈಫ್’ ಜೂನ್ 5, 2025ರಂದು ದೇಶ ವಿದೇಶಗಳ ಥಿಯೇಟರ್ಗಳಲ್ಲಿ ಗ್ರ್ಯಾಂಡ್ ಎಂಟ್ರಿ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ಕೆಲ ದಿನಗಳಿವೆ ಎನ್ನುವಾಗ ನಾಯಕ ನಟ ಭಾಷಾ ವಿವಾದವನ್ನು ಮೈಮೇಲೆ ಎಳೆದುಕೊಂಡ ಹಿನ್ನೆಲೆ, ಚಿತ್ರ ಕರ್ನಾಟಕದಲ್ಲಿ ತೆರೆಕಂಡಿಲ್ಲ. ಸಿನಿಮಾ ಬಿಡುಗಡೆಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್ನಲ್ಲಿದ್ದು, ಇಂದು ವಿಚಾರಣೆ ನಡೆಯಲಿದೆ. ಸಿನಿಮಾ ರಾಜ್ಯದಲ್ಲಿ ತೆರೆಕಾಣುತ್ತೋ, ಇಲ್ಲವೋ? ಎಂಬುದು ಇಂದು ನಿರ್ಧಾರವಾಗೋ ಸಾಧ್ಯತೆಯಿದೆ.

5 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್:
ದಿನ ಇಂಡಿಯಾ ನೆಟ್ ಕಲೆಕ್ಷನ್ಮೊದಲ ದಿನ (ಗುರುವಾರ) 15.5 ಕೋಟಿ ರೂಪಾಯಿ
ಎರಡನೇ ದಿನ (ಶುಕ್ರವಾರ) 7.15 ಕೋಟಿ ರೂಪಾಯಿ
ಮೂರನೇ ದಿನ (ಶನಿವಾರ) 7.75 ಕೋಟಿ ರೂಪಾಯಿ
ನಾಲ್ಕನೇ ದಿನ (ಭಾನುವಾರ) 6.5 ಕೋಟಿ ರೂಪಾಯಿ
ಐದನೇ ದಿನ (ಸೋಮವಾರ) 3.62 ಕೋಟಿ ರೂಪಾಯಿ
ಒಟ್ಟು 40.52 ಕೋಟಿ ರೂಪಾಯಿ
(ಕಲೆಕ್ಷನ್ ಡಾಟಾ ಮೂಲ: ಸ್ಯಾಕ್ನಿಲ್ಕ್ ವರದಿ).
ಇಂದಿನ ಅಂದರೆ ಮೊದಲ ಮಂಗಳವಾರ 0.02 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲಿಗೆ ಒಟ್ಟು ಕಲೆಕ್ಷನ್ 40.54 ಕೋಟಿ ರೂಪಾಯಿ ಆಗಲಿದೆ. ಈ ಅಂಕಿ-ಅಂಶ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯನ್ನಾಧರಿಸಿದೆ.
ಬಹುನಿರೀಕ್ಷಿತ ‘ಥಗ್ ಲೈಫ್’ ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ರಕ್ಷಣೆ ಪೂರೈಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ನಾರಾಯಣ್ ಅವರು ಸಲ್ಲಿಸಿರುವ ಅರ್ಜಿ ಜೂನ್ 3ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತ್ತು.
ವಿವಾದ: ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ “ಕನ್ನಡ ತಮಿಳಿನಿಂದ ಹುಟ್ಟಿದೆ” ಎಂಬ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯ ನಂತರ “ಥಗ್ ಲೈಫ್” ಕರ್ನಾಟಕದಲ್ಲಿ ಟೀಕೆಗಳನ್ನು ಎದುರಿಸಿತು. ನಾಯಕ ನಟನ ಹೇಳಿಕೆಯು ಭಾಷಾ ವಿವಾದಕ್ಕೆ ಕಾರಣವಾಯಿತು. ಕನ್ನಡ ಪರ ಗುಂಪುಗಳು ರಾಜ್ಯದಲ್ಲಿ ಚಿತ್ರ ಬಿಡುಗಡೆಯನ್ನು ವಿರೋಧಿಸಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಯಾವುದೇ ಔಪಚಾರಿಕ ಆಕ್ಷೇಪಣೆಗಳಿಲ್ಲ ಎಂದು ಹೇಳಿದ್ದರೂ, ಕರ್ನಾಟಕದ ವಿತರಕರು ಪ್ರತಿಭಟನೆಗಳ ನಡುವೆ ಚಿತ್ರವನ್ನು ಪ್ರದರ್ಶಿಸದಿರಲು ನಿರ್ಧರಿಸಿದರು. ಚಿತ್ರಮಂಡಳಿ ಕ್ಷಮೆಯಾಚನೆಗೆ ಕೋರಿದೆ. ಈ ವಿಷಯ ಪ್ರಸ್ತುತ ಕಾನೂನು ಚೌಕಟ್ಟಿನಲ್ಲಿದ್ದು, ಇಂದು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.