ಚಂಡೀಗಢ : ರೈತರಿಗೆ ಅಗೌರವ ತೋರಿದ್ದಾರೆಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಂಸದೆ ಕಂಗನಾ ರಣಾವತ್ ಅವರ ಕೆನ್ನೆಗೆ ಹೊಡೆದಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಆಕೆಯ ವಿರುದ್ಧ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕಂಗನಾ ರಣಾವತ್, ಚಂಡೀಗಢ ವಿಮಾನ ನಿಲ್ದಾಣದ ಮಾರ್ಗವಾಗಿ ದಿಲ್ಲಿಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಸಂಸದೆ ಕಂಗನಾ ರಣಾವತ್ ಅವರ ಈ ಹಿಂದಿನ ಹೇಳಿಕೆಯ ಕಾರಣಕ್ಕಾಗಿ ನಾನು ಅಂತಹ ಕೃತ್ಯವೆಸಗಿದೆ ಎಂದು ಆರೋಪಿ ಸಿಬ್ಬಂದಿ ಕುಲ್ವಿಂದರ್ ಕೌರ್ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.
ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತರು ಪ್ರತಿಭಟನೆಗಿಳಿದಿದ್ದಾಗ, “ಅವರೆಲ್ಲ ನೂರು ರೂಪಾಯಿಗಾಗಿ ಪ್ರತಿಭಟನೆಯಲ್ಲಿ ಕುಳಿತಿದ್ದಾರೆ” ಎಂದು ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
“ಅವರು ನೂರು ರೂಪಾಯಿಗಾಗಿ ಅಲ್ಲಿ ಹೋಗಿ ಕೂರಬಲ್ಲರೆ? ನನ್ನ ತಾಯಿಯೂ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಗ ಆಕೆ ಅಂತಹ ಹೇಳಿಕೆ ನೀಡಿದ್ದರು” ಎಂದು ಅಮಾನತುಗೊಂಡಿರುವ ಸಿಐಎಸ್ಎಯಫ್ ಪೇದೆ ಕುಲ್ವಿಂದರ್ ಕೌರ್ ಹೇಳಿದ್ದರು.