ಕರ್ನಾಟಕದಲ್ಲಿ ತಯಾರಾಗುವ ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯ: ಸಿಎಂ ಸಿದ್ದರಾಮಯ್ಯ

ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ ಸಿಎಂ ಸಿದ್ದರಾಮಯ್ಯ.

ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉತ್ಪಾದನೆಯಾಗುವ ಎಲ್ಲಾ ಉತ್ಪನ್ನಗಳ ಮೇಲೆ ಕನ್ನಡದಲ್ಲಿಯೂ ಹೆಸರು ಬರೆಯುವುದನ್ನು ಕಡ್ಡಾಯ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಘೋಷಣೆ ಮಾಡಿದರು.

ವಿಧಾನಸೌಧದ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸುವರ್ಣ ಸಂಭ್ರಮ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಿ ಮುಖ್ಯಮಂತ್ರಿಗಳು ಮಾತನಾಡಿದರು.

ಬಳಿಕ ಮಾತನಾಡಿದ ಸಿಎಂ, ಮೈಸೂರು ಜಿಲ್ಲಾಧಿಕಾರಿ ಕಚೇರಿಯಿದ್ದ ಕಟ್ಟಡವನ್ನು ನಾವು ಅಠಾರ ಎಂದು ಕರೆಯುತ್ತೇವೆ. ಅ ಕಟ್ಟಡದಲ್ಲಿ ಕನ್ನಡ ಸಂಗ್ರಹಾಲಯ’ವನ್ನು ಸರ್ಕಾರ ಸ್ಥಾಪಿಸಲಿದೆ ಎಂದು ಘೋಷಿಸಿದರು.

ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು. ಬೇರೆ ಯಾವ ರಾಜ್ಯದಿಂದ ಜನರ ಬಂದರೂ ಅವರಿಗೆ ಕನ್ನಡ ಕಲಿಸಬೇಕು. ಅವರು ಕನ್ನಡದಲ್ಲೇ ಮಾತನಾಡಿ ವ್ಯವಹಾರ ಮಾಡುವಂತೆ ಮಾಡಬೇಕು. ಸರ್ಕಾರ ಇಂತಹ ಕೆಲಸ ಮಾಡಲಿದ್ದು, ನಾಗರಿಕರೂ ಎಲ್ಲರಿಗೂ ಕನ್ನಡ ಕಲಿಸುತ್ತೇವೆ ಎಂದು ಪ್ರಮಾಣ ಮಾಡಬೇಕು. ಕರ್ನಾಟಕ ಎಂದು ಮರುನಾಮಕರಣವಾಗಿ 51 ವರ್ಷ ತುಂಬಿದೆ. 50 ವರ್ಷ ಆದಾಗಲೇ ಸಮಾರಂಭ ಮಾಡಬೇಕಿತ್ತು. ಬಿಜೆಪಿ ಸರ್ಕಾರ ಮಾಡಲಿಲ್ಲ. ಆದ್ದರಿಂದ, ನಾವು ಬಜೆಟ್‌ನಲ್ಲಿ ಘೋಷಿಸಿ ವರ್ಷಪೂರ್ತಿ ಸುವರ್ಣ ಮಹೋತ್ಸವ ಆಚರಿಸಿದ್ದೇವೆ.

ರಾಜ್ಯೋತ್ಸವ, ಸುವರ್ಣ ಪ್ರಶಸ್ತಿ ಸಂದಿರುವುದು ನಿಮ್ಮ ಸಾಧನೆಗಳಿಂದ. ನಾಡು, ಜಲ, ನೆಲ, ಸಂಸ್ಕೃತಿ ನಾಡಿಗೆ ನೀವು ನೀಡಿರುವ ಕೊಡುಗೆಗಳನ್ನು ಗುರುತಿಸಿ ನೀಡಲಾಗಿದೆ. ನಿಮಗೆ ಪ್ರಶಸ್ತಿ ಪ್ರದಾನ ಮಾಡುವುದರೊಂದಿಗೆ ಸರ್ಕಾರ ತನ್ನನ್ನು ತಾನೂ ಗೌರವಿಸಿಕೊಂಡಿದೆ. ನೀವು ಇನ್ನೂ ಹೆಚ್ಚಿನ ಸಾಧನೆ ಮಾಡಿ, ಎಲ್ಲರಿಗೂ ಮಾದರಿ ಆಗಿ ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *