ಕರ್ನಾಟಕ ಬಜೆಟ್ 2026: ಕನ್ನಡ ಚಿತ್ರರಂಗಕ್ಕೆ ಭರ್ಜರಿ ಘೋಷಣೆಗಳು.

ಕರ್ನಾಟಕ ಬಜೆಟ್ 2026: ಕನ್ನಡ ಚಿತ್ರರಂಗಕ್ಕೆ ಭರ್ಜರಿ ಘೋಷಣೆಗಳು.

ಮೈಸೂರು ಫಿಲ್ಮ್ ಸಿಟಿಗೆ 500 ಕೋಟಿ ರೂ., ಸಿನಿ ಮಿತ್ರ ಡಿಜಿಟಲ್ ವ್ಯವಸ್ಥೆ ಜಾರಿ.

ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಾರಿ ಕರ್ನಾಟಕ ಬಜೆಟ್ ಅನ್ನು ಇಂದು (ಮಾರ್ಚ್ 06) ಮಂಡಿಸಿದರು. ಹಲವಾರು ಕ್ಷೇತ್ರಗಳಿಗೆ ಹಲವು ಅನುದಾನ, ಯೋಜನೆಗಳನ್ನು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ. ನಿರೀಕ್ಷೆಯಂತೆ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಕೃಷಿ ಇನ್ನಿತರೆ ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಕನ್ನಡ ಚಿತ್ರರಂಗವೂ ಸಹ ಈ ಬಾರಿಯ ಬಜೆಟ್​​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿತ್ತು. ಹಾಗಿದ್ದರೆ ಬಜೆಟ್​​ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು? ಮಾಹಿತಿ ಇಲ್ಲಿದೆ…

ಹೆಸರಘಟ್ಟದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ನಡೆಸಲಾಗುತ್ತಿರುವ ಸೌಂಡ್ ರೆಕಾರ್ಡಿಂಗ್ ಮತ್ತು ಇಂಜಿನಿಯರಿಂಗ್ ಹಾಗೂ ಸಿನಿಮಾಟೊಗ್ರಫಿ ಕೋರ್ಸುಗಳಿಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು ಎಂದು ಸಿಎಂ ಅವರು ಬಜೆಟ್​​ನಲ್ಲಿ ಘೋಷಿಸಿದ್ದಾರೆ.

ರಾಜ್ಯದಲ್ಲಿ ಚಲನಚಿತ್ರ ಹಾಗೂ ಇತರೆ ಚಿತ್ರೀಕರಣಗಳಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಒಂದೇ ವೇದಿಕೆಯಲ್ಲಿ ನೀಡುವ ಸಲುವಾಗಿ ‘ಸಿನಿ ಮಿತ್ರ’ ಎಂಬ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಬಜೆಟ್​​ನಲ್ಲಿ ಘೋಷಿಸಲಾಗಿದೆ. ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು ಇದರಿಂದ ಸುಲಭವಾಗುವ ಜೊತೆಗೆ ನಿಯಮಗಳ ಪಾಲನೆ ಕಡ್ಡಾಯ ಆಗಲಿದೆ.

ಗುಣಾತ್ಮಕ ಚಲನಚಿತ್ರಗಳಿಗೆ ನೀಡಲಾಗುತ್ತಿದ್ದ ಸಹಾಯಧನವು ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, 2025-26 ನೇ ಸಾಲಿನಲ್ಲಿ ಮೂರು ವರ್ಷಗಳ ಚಲನಚಿತ್ರಗಳನ್ನು ಗುರುತಿಸಿ ನಮ್ಮ ಸರ್ಕಾರದಲ್ಲಿ ಸಹಾಯಧನವನ್ನು ನೀಡಲಾಗಿರುತ್ತದೆ. ಪ್ರಸಕ್ತ ಸಾಲಿಗೆ ಉಳಿದ ಮೂರು ವರ್ಷಗಳ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಹಾಯಧನವನ್ನು ನೀಡಲು 20 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ಮತ್ತು ಲಿಜೆಂಡರಿ ನಿರ್ದೇಶಕ ಆಗಿರುವ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​​ನಲ್ಲಿ ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *