ಗ್ರಾಹಕರ ಕಣ್ಣೀರೊರೆಸಲು ಮುಂದಾದ ಕೇಂದ್ರ : 35 ರೂಪಾಯಿಗೆ ಕೆ.ಜಿ ಈರುಳ್ಳಿ

ಈರುಳ್ಳಿ ಮಾರಾಟದ ಸಂಚಾರಿ ವಾಹನಗಳಿಗೆ ಸಚಿವ ಪ್ರಹ್ಲಾದ್​ ಜೋಶಿ ಚಾಲನೆ

ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಒಂದು ಕೆ.ಜಿಗೆ 35 ರೂ. ದರದಲ್ಲಿ ವಿತರಣೆ ಆರಂಭಿಸಿದೆ.

ನವದೆಹಲಿಯಲ್ಲಿ ಗುರುವಾರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ 3 ಈರುಳ್ಳಿ ಮಾರಾಟ ಮಾಡುವ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ದೇಶದಲ್ಲಿ ಆಹಾರ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಈಗ ಏರಿಕೆ ಕಂಡಿರುವ ಈರುಳ್ಳಿ ದರ ಇಳಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು.

ಮುಂದಿನ ವಾರ ಬೆಂಗಳೂರಿನಲ್ಲಿ ವಿತರಣೆ: “ದೆಹಲಿಯ ಎನ್​ಸಿಆರ್​ ಮತ್ತು ಮುಂಬೈನಲ್ಲಿ ನಿನ್ನೆಯಿಂದ ಈರುಳ್ಳಿ ಚಿಲ್ಲರೆ ವಿತರಣೆ ಆರಂಭವಾಗಿದೆ. ಮುಂದಿನ ವಾರ ಬೆಂಗಳೂರು ಸೇರಿದಂತೆ ಕೋಲ್ಕತ್ತಾ, ಗುವಾಹಟಿ, ಹೈದರಾಬಾದ್, ಚೆನ್ನೈ, ಅಹಮದಾಬಾದ್, ರಾಯಪುರ ಮತ್ತು ಭುವನೇಶ್ವರದಲ್ಲಿ ಕಡಿಮೆ ಬೆಲೆಯಲ್ಲಿ ಈರುಳ್ಳಿ ವಿತರಣೆ ಶುರುವಾಗಲಿದೆ. ಸೆಪ್ಟೆಂಬರ್ 3ನೇ ವಾರದಲ್ಲಿ ದೇಶಾದ್ಯಂತ ವಿತರಣೆ ನಡೆಯಲಿದೆ” ಎಂದು ಅವರು ಮಾಹಿತಿ ನೀಡಿದರು.

4.7 ಲಕ್ಷ ಟನ್ ಈರುಳ್ಳಿ ಲಭ್ಯ- ಸಚಿವ​​ ಜೋಶಿ: “ಹಿಂಗಾರು ಹಂಗಾಮಿನಲ್ಲಿ ಬೆಳೆದ 4.7 ಲಕ್ಷ ಟನ್​ ಈರುಳ್ಳಿ ಸದ್ಯ ಸಂಗ್ರಹವಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್‌) ಮತ್ತು ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್‌ಎಎಫ್‌ಇಡಿ) ಮಳಿಗೆಗಳು ಮತ್ತು ಸಂಚಾರಿ ವಾಹನಗಳು, ಇ-ಕಾಮರ್ಸ್​ ಪ್ಲಾಟ್‌ಫಾರ್ಮ್‌ಗಳು ಮತ್ತು ಕೇಂದ್ರೀಯ ಭಂಡಾರ ಮತ್ತು ಸಫಲ್​ ಮಳಿಗೆಗಳ ಮೂಲಕ ಚಿಲ್ಲರೆ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದರು.

ಮುಂದುವರೆದು, “ಬೆಲೆ ಪ್ರವೃತ್ತಿಗೆ ಅನುಗುಣವಾಗಿ ಈರುಳ್ಳಿಯ ಪ್ರಮಾಣ ಮತ್ತು ವಿಲೇವಾರಿ ಮಾರ್ಗಗಳನ್ನು ವಿಸ್ತರಿಸಲಾಗುತ್ತದೆ. ಗ್ರಾಹಕ ವ್ಯವಹಾರಗಳ ಇಲಾಖೆ, ದೇಶಾದ್ಯಂತ 550 ಕೇಂದ್ರಗಳು ವರದಿ ಮಾಡಿದ ಈರುಳ್ಳಿ ಸೇರಿದಂತೆ 38 ಸರಕುಗಳ ದೈನಂದಿನ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಕಳೆದ ವರ್ಷ 3 ಲಕ್ಷ ಟನ್ ಈರುಳ್ಳಿ ಖರೀದಿಸಿದ್ದು, ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಅದಕ್ಕಿಂತ ಹೆಚ್ಚು 4.7 ಲಕ್ಷ ಟನ್​ ಖರೀದಿಸಿ ಬೆಲೆ ಸ್ವೀಕರಿಸುವುದು ಗಮನಾರ್ಹ” ಎಂದರು.

Leave a Reply

Your email address will not be published. Required fields are marked *