ತಿರುವನಂತಪುರಂ/ಮಂಗಳೂರು: ಕೇರಳದ ಕರಾವಳಿಯಲ್ಲಿ ಸಿಂಗಾಪುರದ ಹಡಗು ಮೂಡಿಸಿದ ಆತಂಕ ಇನ್ನೂ ಕೊನೆಯಾಗಿಲ್ಲ. ಬೆಂಕಿಯುಗುಳುತ್ತಲೇ ಇರುವ ಹಡಗನ್ನು 48 ಗಂಟೆ ಕಳೆದರೂ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಇದರಿಂದ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ.

ಕ್ಷಣಕ್ಷಣಕ್ಕೂ ಸ್ಫೋಟಗೊಳ್ಳುತ್ತಿರುವ ಸಿಂಗಾಪುರದ ಎಂ.ವಿ. ವಾನ್‌ಹೇ 503 ಕೇರಳ-ಮಂಗಳೂರು ಕಡಲತೀರವನ್ನು ಆತಂಕಕ್ಕೆ ತಳ್ಳಿದೆ. ಈ ಮಧ್ಯೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ಹಡಗಿನಲ್ಲಿ ಇನ್ನಷ್ಟು ಪ್ರಖರವಾಗಿ ಬೆಂಕಿ ಪಸರಿಸಲು ಬೇಕಾದ ಸಾಮಗ್ರಿಗಳಿರೋದು ಆತಂಕಕ್ಕೆ ಕಾರಣವಾಗಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಹಡಗಿನಲ್ಲಿ ಪೆಟ್ರೋಲ್, ಡೀಸೆಲ್, ನೈಟ್ರೋ ಸೆಲ್ಯೂಲೋಸ್ ನಂತಹ ಕಂಟೇನರ್‌ಗಳು ಇರೋದೆ ಈ ಆತಂಕಕ್ಕೆ ಕಾರಣ. ಒಟ್ಟಾರೆ ಅದರಲ್ಲಿರುವ 600ಕ್ಕೂ ಅಧಿಕ ಕಂಟೇನರ್‌ಗಳಲ್ಲಿ 157 ಕಂಟೇನರ್‌ಗಳಲ್ಲಿ ಅಪಾಯಕಾರಿ ಐಟಂಗಳನ್ನು ಸಂಗ್ರಹಿಸಿಟ್ಟಿರುವುದು ದೃಢಪಟ್ಟಿದೆ. ಈಗಾಗಲೇ ಹಡಗಿನಲ್ಲಿದ್ದ 18 ಮಂದಿಯನ್ನು ಭಾರತೀಯ ನೌಕಾದಳ ರಕ್ಷಿಸಿ, ಮಂಗಳೂರಿಗೆ ಕರೆ ತಂದಿದೆ. ಉಳಿದಂತೆ ಕಣ್ಮರೆಯಾಗಿರುವ ನಾಲ್ವರಿಗಾಗಿ ಹುಡುಕಾಟ ಮುಂದುವರೆದಿದೆ. ಈ ನಡುವೆ ನೌಕಾದಳ ಬೆಂಕಿಯನ್ನು ನಿಯಂತ್ರಿಸಲು ಭಾರೀ ಸಾಹಸ ಪಡುತ್ತಿದೆ.
ಬೆಂಕಿ ಈ ಮಟ್ಟಿಗೆ ಹರಡೋದಕ್ಕೆ ಅದರಲ್ಲಿದ್ದ ಸಾಮಗ್ರಿಗಳೇ ಕಾರಣ ಎನ್ನಲಾಗುತ್ತಿದೆ. 240 ಟನ್ ಡೀಸೆಲ್, 2,000 ಟನ್ ಇಂಧನ ತೈಲ ಇದ್ದು, ಅದಲ್ಲದೇ ಇತರೆ ತೈಲ ಸಾಮಗ್ರಿಗಳು, ಪ್ಲಾಸ್ಟಿಕ್ ಇವೆಲ್ಲವೂ ಬೆಂಕಿ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಗಾಳಿ ಮಳೆಯೂ ಬೆಂಕಿ ಹರಡಲು ಕಾರಣವಾಗುತ್ತಿದೆ. ಅದಾಗ್ಯೂ ನೌಕಾದಳ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಬೇಕಾದ ಪ್ರಯತ್ನದಲ್ಲಿದೆ. ಹಡಗು ತುಂಡರಿದು ಸಮುದ್ರ ಸೇರುವ ಸಾಧ್ಯತೆಯೂ ಇದ್ದು, ಯಾವುದಕ್ಕೂ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನು ಎಂಬುದು ಕೂಡಾ ಗೊತ್ತಾಗಿಲ್ಲ.

ಹಡಗಿನಲ್ಲಿದ್ದ ತಂಡದಲ್ಲಿ ಇಂಜಿನಿಯರ್‌ಗಳಿದ್ರೂ, ಇಂಜಿನ್ ವಿಭಾಗಗಳನ್ನು ಪರಿಶೀಲಿಸುತ್ತಿದ್ದರೂ ಇಂತಹ ಅವಘಡ ಸಂಭವಿಸಿರುವುದು ಆಶ್ಚರ್ಯ ಮೂಡಿಸಿದೆ. ಯಾವೊಂದು ಸಿಗ್ನಲ್ ಅನ್ನು ಕೂಡಾ ಹಡಗು ನೀಡಿರಲಿಲ್ಲವೇ ಎಂಬ ಪ್ರಶ್ನೆಗೂ ಸದ್ಯ ಉತ್ತರವಿಲ್ಲದಾಗಿದೆ. ಅಗ್ನಿ ಅನಾಹುತದ ಬಗ್ಗೆ ಎಚ್ಚರಿಕೆ ನೀಡುವ ಹಡಗು ಇಲ್ಲಿ ಯಾಕೆ ಅನಾಹುತಕ್ಕೆ ಸಿಲುಕಿತು ಎಂಬುದಕ್ಕೂ ಸೂಕ್ತ ಉತ್ತರವಿಲ್ಲ. ಒಟ್ಟಿನಲ್ಲಿ ಕೊಲಂಬೋದಿಂದ ಹೊರಟು ಮುಂಬೈ ಸೇರಬೇಕಿದ್ದ ಸಿಂಗಾಪುರದ ಕಾರ್ಗೋ ಹಡಗು ಕೇರಳದ ಕಣ್ಣೂರು ಕರಾವಳಿ ಪ್ರದೇಶದಲ್ಲಿ ಹೊತ್ತಿ ಉರಿಯುತ್ತಿರುವುದು ಸದ್ಯ ಇಡೀ ಕರಾವಳಿಯನ್ನು ಆತಂಕಕ್ಕೆ ತಳ್ಳಿದೆ.