ಕಿವಿ ಹಣ್ಣು ಯಾರಿಗೆ ತಾನೇ ತಿಳಿದಿಲ್ಲ ಹೇಳಿ!… ಇದರ ಆರೋಗ್ಯ ಪ್ರಯೋಜನಗಳಿಂದ ಬಹಳ ಜನಪ್ರಿಯತೆ ಪಡೆದುಕೊಂಡ ಹಣ್ಣುಗಳಲ್ಲಿ ಇದು ಒಂದು. ಆದರೆ ಅತಿಯಾಗಿ ಸೇವನೆ ಮಾಡಿದರೆ ಅಮೃತ ಕೂಡ ವಿಷವಾಗುತ್ತೆ ಎಂಬ ಮಾತನ್ನು ನೀವೂ ಕೇಳಿರಬಹುದು. ಹೌದು, ಯಾವುದೇ ಆಗಿರಲಿ ಒಂದು ಮಿತಿ ಮೀರಿ ಸೇವನೆ ಮಾಡಿದಾಗ ಅದರಿಂದ ಸಿಗುವ ಪ್ರಯೋಜನಕ್ಕಿಂತ ಹಾನಿಯೇ ಜಾಸ್ತಿಯಾಗಿರುತ್ತದೆ. ಕಿವಿ ಹಣ್ಣು ಕೂಡ ಇದರಿಂದ ಹೊರತಾಗಿಲ್ಲ. ವಿಟಮಿನ್ ಸಿ ಜೊತೆಗೆ ಹಲವು ಪೋಷಕಾಂಶಗಳ ಗಣಿಯಾಗಿರುವ ಈ ಹಣ್ಣು ಎಲ್ಲರಿಗೂ ಒಳ್ಳೆಯದಲ್ಲ. ಜೊತೆಗೆ ಹೆಚ್ಚು ಕಿವಿ ತಿನ್ನುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಕೂಡ ಹೇಳುತ್ತಾರೆ. ಹಾಗಾಗಿ ಈ ಹಣ್ಣಿನ ಪ್ರಯೋಜನಗಳ ಬಗ್ಗೆ ಮಾತ್ರವಲ್ಲ ಅದನ್ನು ಅತಿಯಾಗಿ ಸೇವಿಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಇಲ್ಲಿದೆ.
ಅಲರ್ಜಿ ಇರುವವರಿಗೆ ಒಳ್ಳೆಯದಲ್ಲ:
ಕಿವಿ ಹಣ್ಣಿನಲ್ಲಿ ಆಕ್ಟಿನಿಡಿನ್ ಎಂಬ ಪ್ರೋಟೀನ್ ಇರುತ್ತದೆ. ಇದು ಕೆಲವರಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು. ಇದರಿಂದ ಬಾಯಿ ಅಥವಾ ಗಂಟಲಿನಲ್ಲಿ ತುರಿಕೆ, ಊತ, ಎದೆಯ ಮೇಲೆ ದದ್ದುಗಳು ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ನಿಮಗೆ ಬಾಳೆಹಣ್ಣು ಅಥವಾ ಆವಕಾಡೊಗಳಿಂದ ಅಲರ್ಜಿ ಇದ್ದರೆ, ನೀವು ಕಿವಿ ಹಣ್ಣುಗಳ ಸೇವನೆ ಮಾಡುವಾಗಲೂ ಸ್ವಲ್ಪ ಜಾಗರೂಕರಾಗಿರಬೇಕಾಗುತ್ತದೆ. ಹಾಗಾಗಿ ಎಲ್ಲಿಯಾದರೂ ಕಿವಿ ಹಣ್ಣು ತಿಂದ ತಕ್ಷಣ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ, ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಿ.
ಬಾಯಿಯಲ್ಲಿ ಉರಿಯುವ ಸಂವೇದನೆಗೆ ಕಾರಣವಾಗುತ್ತೆ:
ಕಿವಿ ಹಣ್ಣಿನಲ್ಲಿರುವ ಕಿಣ್ವಗಳು ಕೆಲವರಲ್ಲಿ ಬಾಯಿ, ತುಟಿ ಅಥವಾ ಗಂಟಲಿನಲ್ಲಿ ಜೊಲ್ಲು ಸುರಿಸುವ ಅಥವಾ ಸುಡುವ ಸಂವೇದನೆ ಕಂಡುಬರುವುದಕ್ಕೆ ಕಾರಣವಾಗಬಹುದು. ಹೆಚ್ಚಿನವರಿಗೆ, ಇದು ಸ್ವಲ್ಪ ಸಮಯದ ವರೆಗೆ ಮಾತ್ರ ಇರುತ್ತದೆ. ಹಾಗಾಗಿ ಈ ರೀತಿ ಉರಿ ಬರುವುದನ್ನು ತಡೆಯಲು ಅಥವಾ ಕಡಿಮೆ ಮಾಡಲು, ಮಾಗಿದ ಕಿವಿ ಹಣ್ಣನ್ನು ಅದರ ಸಿಪ್ಪೆ ತೆಗೆದು ತಿನ್ನಿರಿ.
ಜೀರ್ಣಕ್ರಿಯೆಯ ಸಮಸ್ಯೆಗಳು:
ಕಿವಿಯಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಾದರೂ, ಅತಿಯಾಗಿ ತಿನ್ನುವುದರಿಂದ ಸಮಸ್ಯೆಗಳು ಉಂಟಾಗಬಹುದು. ಮಾತ್ರವಲ್ಲ ಮಿತಿಮೀರಿ ಈ ಹಣ್ಣನ್ನು ತಿನ್ನುವುದರಿಂದ ಗ್ಯಾಸ್, ಉಬ್ಬುವುದು ಅಥವಾ ಅತಿಸಾರ ಉಂಟಾಗುತ್ತದೆ. ಹಾಗಾಗಿ ವಾರಕ್ಕೆ ಒಂದು ಅಥವಾ ಎರಡು ಕಿವಿ ಹಣ್ಣುಗಳನ್ನು ಮಾತ್ರ ತಿನ್ನಿರಿ. ಮಾತ್ರವಲ್ಲ ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಮಾತ್ರ ಈ ಹಣ್ಣುಗಳ ಸೇವನೆ ಮಾಡಬೇಡಿ.
ಕೆಲವು ಔಷಧಿ ತೆಗೆದುಕೊಳ್ಳುವವರಿಗೆ ಒಳ್ಳೆಯದಲ್ಲ:
ಕಿವಿ ಹಣ್ಣಿನಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಹಾಗಾಗಿ, ಹೃದಯ ಸಂಬಂಧಿ ಸಮಸ್ಯೆ ಅಥವಾ ಅಧಿಕ ರಕ್ತದೊತ್ತಡಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವವರು ಹೆಚ್ಚು ಕಿವಿ ಹಣ್ಣನ್ನು ತಿಂದರೆ ರಕ್ತದಲ್ಲಿ ಪೊಟ್ಯಾಸಿಯಮ್ ಮಟ್ಟ ಹೆಚ್ಚಾಗಬಹುದು, ಇದು ಸಮಸ್ಯೆಗಳನ್ನು ಉಂಟುಮಾಡಬಹುದು. ಅದೇ ರೀತಿ, ರಕ್ತ ತೆಳುವಾಗಿಸುವ ಔಷಧಿಗಳನ್ನು ತೆಗೆದುಕೊಳ್ಳುವವರು ಕೂಡ ಕಿವಿ ಹಣ್ಣನ್ನು ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ಚರ್ಮದ ಮೇಲೆ ದದ್ದುಗಳು:
ಕಿವಿ ಸಿಪ್ಪೆಯ ಮೇಲಿನ ಸಣ್ಣ ಕೂದಲಿನಂತಹ ಸೂಕ್ಷ್ಮ ನಾರುಗಳು, ಕಿವಿ ಹಣ್ಣಿನಿಂದ ಅಲರ್ಜಿ ಆಗುವವರಲ್ಲಿ ಚರ್ಮದಲ್ಲಿ ಕಿರಿಕಿರಿ ಅಥವಾ ಕೆಂಪು ಬಣ್ಣದ ದದ್ದುಗಳು ಕಂಡುಬರುವುದಕ್ಕೆ ಕಾರಣವಾಗಬಹುದು. ಅದಕ್ಕಾಗಿ ದದ್ದುಗಳು ಕಾಣಿಸಿಕೊಂಡ ತಕ್ಷಣ ಆ ಸ್ಥಳವನ್ನು ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ. ಇದೆ ರೀತಿ ಈ ಹಣ್ಣು ಎಷ್ಟೇ ಆರೋಗ್ಯಕರವಾಗಿದ್ದರೂ, ಕೂಡ ಅದನ್ನು ಮಿತವಾಗಿ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ.
For More Updates Join our WhatsApp Group :
