ಹಾಸನ: ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಸಾವನ್ನಪ್ಪಿರುವಂತಹ ಭೀಕರ ಘಟನೆಯೊಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಎಡೇಗೌಡನಹಳ್ಳಿ ಬಳಿ ಶನಿವಾರ ರಾತ್ರಿ ನಡೆದಿದೆ. ಇರ್ಫಾನ್(25), ತರುಣ್(26) ಮತ್ತು ರೇವಂತ್(27) ಮೃತ ಯುವಕರು. ಹಳ್ಳಿಮೈಸೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೃತರು ಹೊಳೆನರಸೀಪುರ ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿಗಳು ಎನ್ನಲಾಗುತ್ತಿದೆ. ಕೆಎಸ್ಆರ್ಟಿಸಿ ಬಸ್ ಹಾಸನದಿಂದ ಮೈಸೂರು ಕಡೆಗೆ ಹೊರಟಿತ್ತು. ಮೈಸೂರು ಕಡೆಯಿಂದ ಒಂದೇ ದ್ವಿಚಕ್ರ ವಾಹನದಲ್ಲಿ ಮೂವರು ಯುವಕರು ಬರುತ್ತಿದ್ದರು. ಈ ವೇಳೆ ಭೀಕರ ಅಪಘಾತ ಸಂಭವಿಸಿದೆ.
ಇನ್ನು ಡಿಕ್ಕಿ ರಭಸಕ್ಕೆ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೊಲೆರೋ ವಾಹನ ಹರಿದು 10 ಕುರಿಗಳ ಸಾವು: ಕುರಿಗಾಹಿ ಪಾರು
ಬೊಲೆರೋ ವಾಹನ ಹರಿದು 10 ಕುರಿಗಳು ಸಾವನ್ನಪ್ಪಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕುಂದನಹಳ್ಳಿ ಗ್ರಾಮದಲ್ಲಿ ನಡೆದಿದೆ. ತುಮಕೂರು ಮೂಲದ ಕುರಿಗಾಯಿ ಈರಣ್ಣ ಎಂಬುವವರಿಗೆ ಕುರಿಗಳು ಸೇರಿದ್ದವು.
ರಸ್ತೆ ಬದಿಯಲ್ಲಿ ಕುರಿಗಳ ಹಿಂಡು ಬರುತ್ತಿತ್ತು. ಈ ವೇಳೆ ಕುರಿ ಹಿಂಡಿನ ಮೇಲೆ ಏಕಾಏಕಿ ಬೊಲೆರೋ ವಾಹನ ನುಗ್ಗಿದ ಪರಿಣಾಮ 10 ಕುರಿಗಳು ಸಾವನ್ನಪ್ಪಿದ್ದರೆ, 10ಕ್ಕೂ ಹೆಚ್ಚು ಕುರಿಗಳಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದಿಂದ 2 ಲಕ್ಷ ರೂ ಅಧಿಕ ನಷ್ಟವಾಗಿದೆ. ಚಾಲಕ ಕುಡಿದು ವಾಹನ ಚಲಾಯಿಸಿರುವ ಬಗ್ಗೆ ಸದ್ಯ ಅನುಮಾನ ಮೂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರಂತರ ಮಳೆಗೆ 20ಕ್ಕೂ ಹೆಚ್ಚು ಕುರಿಗಳ ಸಾವು
ಇನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗುಡದೂರ ಗ್ರಾಮದಲ್ಲಿ ನಿರಂತರ ಮಳೆಯಿಂದ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಯಂಕಪ್ಪ, ಹಿರೇಹನಮಂತಪ್ಪ ಹಾಗೂ ಸಣ್ಣ ಯಂಕಪ್ಪ ಎಂಬುವವರಿಗೆ ಕುರಿಗಳು ಸೇರಿದ್ದವು. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.
For More Updates Join our WhatsApp Group :
