ಕುಣಿಗಲ್​ ಶಾಸಕ ರಂಗನಾಥ್​​ ಆಯ್ಕೆ ಅಸಿಂಧು ಕೋರಿ ಸುಪ್ರೀಂ​ಗೆ ಅರ್ಜಿ : ನೋಟಿಸ್​ ಜಾರಿ

ranganath

ತುಮಕೂರಿನ ಕುಣಿಗಲ್​ ಕ್ಷೇತ್ರದ ಶಾಸಕ ಡಾ.ಎಚ್​​.ಡಿ.ರಂಗನಾಥ್​ ಅವರು 2023 ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಕೃಷ್ಣಕುಮಾರ್​ ಅವರು ಆರೋಪಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಲು ಸೂಚಿಸಿ ಕಾಂಗ್ರೆಸ್​ ಶಾಸಕರಿಗೆ ನ್ಯಾಯಾಲಯ ಮಂಗಳವಾರ ನೋಟಿಸ್​​ ಜಾರಿ ಮಾಡಿದೆ.

ಈ ಹಿಂದೆ ರಂಗನಾಥ್​ ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಕೋರಿ ಬಿಜೆಪಿ ನಾಯಕ ಕೃಷ್ಣಕುಮಾರ್​ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೋರ್ಟ್​ ತಿರಸ್ಕರಿಸಿತ್ತು. ಇದರ ವಿರುದ್ಧ ಅವರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್​​ ಮತ್ತು ಉಜ್ಜಲ್​ ಭುಯಾನ್​ ಅವರಿದ್ದ ಪೀಠ ಕಾಂಗ್ರೆಸ್​ ಶಾಸಕರಿಗೆ ನೋಟಿಸ್​ ರವಾನಿಸಿದೆ.

ಪರಾಜಿತ ಅಭ್ಯರ್ಥಿ ಮಾಡಿರುವ ಆರೋಪಗಳ ಬಗ್ಗೆ ಸೆಪ್ಟೆಂಬರ್​ 23 ರೊಳಗೆ ಪ್ರತಿಕ್ರಿಯಿಸಿ. ಈ ಬಗ್ಗೆ ಯಾವುದಾದರೂ ತಕರಾರು ಮತ್ತು ದಾಖಲೆಗಳಿದ್ದರೆ ಕೋರ್ಟ್​ಗೆ ಸಲ್ಲಿಸಿ ಎಂದು ನೋಟಿಸ್​​ನಲ್ಲಿ ಸೂಚಿಸಲಾಗಿದೆ. ಮುಂದಿನ ವಿಚಾರಣೆಯನ್ನು ಎರಡು ವಾರಗಳ ನಂತರ ನಡೆಸಲಾಗುವುದು ಎಂದು ಪೀಠ ಹೇಳಿದೆ.

ಅರ್ಜಿಯ ಆರೋಪವೇನು?: ಕುಣಿಗಲ್​ ಶಾಸಕ ರಂಗನಾಥ್​ ಅವರು ಚುನಾವಣೆಯ ವೇಳೆ ಅಕ್ರಮ ಎಸಗಿದ್ದಾರೆ. ಅಡುಗೆ ಸಾಮಾನು, ಡಿನ್ನರ್​​ ಸೆಟ್​, ಪ್ರೀಪೇಯ್ಡ್​​ ಕಾರ್ಡ್​ಗಳನ್ನು ನೀಡಿ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ, ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಕೃಷ್ಣಕುಮಾರ್​ ಅವರು ಮನವಿ ಮಾಡಿದ್ದಾರೆ. ಇದರ ಜೊತೆಗೆ ರಂಗನಾಥ್​ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​​ನಲ್ಲಿ ತಮ್ಮ ಆಸ್ತಿ ಮತ್ತು ಹೊಣೆಗಾರಿಗೆ ಬಗ್ಗೆಯೂ ಸುಳ್ಳು ಹೇಳಿದ್ದರೆ ಎಂದು ಅರ್ಜಿಯಲ್ಲಿ ದೂರಲಾಗಿದೆ

Leave a Reply

Your email address will not be published. Required fields are marked *