ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್’ ಅವರ ಜೀವನ ವಿಷಯಾಧಾರಿತ ಹೂವಿನ ಪ್ರತಿಕೃತಿ ಕಣ್ಮನ ಸೆಳೆಯಲಿದೆ.
ಸ್ವಾತಂತ್ರೋತ್ಸವದ ಅಂಗವಾಗಿ 2024ರ ಅಗಸ್ಟ್ 8ರಿಂದ ಅಗಸ್ಟ್ 19ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ಈಗಾಗಲೇ ತೋಟಗಾರಿಕೆ ಇಲಾಖೆ ವಿವಿಧ ಬಗೆಯ ಅಲಂಕಾರಿಕ, ದೇಶಿ–ವಿದೇಶಿ ಹೂಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಲಾಲ್‌ಬಾಗ್‌ನ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ ಮಾತನಾಡಿ, ಗಾಜಿನ ಮನೆಯಲ್ಲಿ ಅಂಬೇಡ್ಕರ್ ಅವರ ಪುತ್ಥಳಿ, ಕಲಾಕೃತಿಗಳು ಸೇರಿ ಅವರ ಜೀವನದ ಪ್ರಮುಖ ಘಟನೆಗಳ ಛಾಯಾಚಿತ್ರಗಳು, ಸಂಕ್ಷಿಪ್ತ ಮಾಹಿತಿ ಒದಗಿಸುವ ಬ್ಯಾನರ್‌ಗಳನ್ನು ಅಳವಡಿಸಲಾಗುವುದು. ಗಾಜಿನ ಮನೆಯಲ್ಲಿ ಒಂದು ಭಾಗದಲ್ಲಿ ಸಂಸತ್ ಭವನ, ಅಂಬೇಡ್ಕರ್ ಅವರು ಜನಿಸಿದ ಸ್ಥಳ ಹಾಗೂ ಸಂವಿಧಾನದ ಪ್ರತಿಕೃತಿಗಳನ್ನು ಪುಷ್ಪಗಳಲ್ಲಿ ಅಲಂಕರಿಸುವ ಕುರಿತು ತಜ್ಞರೊಂದಿಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಎರಡು ಮೂರು ಸಭೆಗಳು ನಡೆದಿವೆ.
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳನ್ನು ಹೂ ರಾಶಿಯ ಮೂಲಕ ಯುವ ಸಮೂಹ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶವಿದೆ. ಲಾಲ್‌ಬಾಗ್‌ನ ಎಲ್ಲ ದ್ವಾರಗಳಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿಸುವ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು. ಗಾಜಿನ ಮನೆಯ ಒಳಾಂಗಣದಲ್ಲಿ ಐತಿಹಾಸಿಕ ಘಟನೆಗಳನ್ನು ಸಾರುವ ಫ್ಲೆಕ್ಸ್‌ಗಳು, ಪ್ರತಿಕೃತಿಗಳನ್ನು ಅಳವಡಿಸುವ ಕುರಿತು ಚಿಂತನೆ ನಡೆಯುತ್ತಿದೆ. ಜುಲೈ ಅಂತ್ಯ ಅಥವಾ ಆಗಸ್ಟ್ 1 ನೇ ವಾರದೊಳಗೆ ಕೆಲಸ ಪ್ರಾರಂಭಿಸಲು ಕಾರ್ಮಿಕರಿಗೆ ಸೂಚಿಸಲಾಗುವುದು ಎಂದು ಹೇಳಿದರು.