ಚಿಕ್ಕಬಳ್ಳಾಪುರ: ಶಾಲು ಕಟ್ಟಿಕೊಂಡು ನವವಿವಾಹಿತೆ ಮತ್ತು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂತಾಮಣಿ ತಾಲೂಕಿನ ಮುದ್ದಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕಾಚಹಳ್ಳಿ ಗ್ರಾಮದ ಅನುಷಾ (19) ಹಾಗೂ ಕೋರ್ಲಪರ್ತಿ ಬಳಿಯ ಎಂ. ಮುದ್ದಲಹಳ್ಳಿ ಗ್ರಾಮದ ಯುವಕ ವೇಣು (21) ಎಂದು ಗುರುತಿಸಲಾಗಿದೆ.
ಮೃತರಿಬ್ಬರೂ ಕಳೆದ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅನುಷಾಳ ಮನೆಯಲ್ಲಿ ಇವರ ಪ್ರೀತಿಗೆ ಒಪ್ಪಿದ ಪೋಷಕರು, ತಾಲೂಕಿನ ಕಾಚಹಳ್ಳಿ ಗ್ರಾಮದ ಯುವಕನ ಜೊತೆ ಕಳೆದ ತಿಂಗಳು ಮದುವೆ ಮಾಡಿಸಿದ್ದರು. ಆಷಾಢ ಮಾಸದ ಹಿನ್ನೆಲೆಯಲ್ಲಿ ಅನುಷಾ ತವರು ಮನೆಗೆ ಬಂದಿದ್ದಳು. ಈ ವೇಳೆ ಅನುಷಾ ಹಾಗೂ ವೇಣು ಮತ್ತೆ ದೂರವಾಣಿ ಮೂಲಕ ಸಂಪರ್ಕ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಇಬ್ಬರ ಶವಗಳು ಶಾಲು ಕಟ್ಟಿಕೊಂಡ ರೀತಿಯಲ್ಲಿ ಶನಿವಾರ ಕೃಷಿ ಹೊಂಡದಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಅನುಷಾಳಿಗೆ ಆಕೆಯ ಗಂಡ ಫೋನ್ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗದಿದ್ದಾಗ ಹುಡುಕಾಟ ನಡೆಸಿ, ಪೊಲೀಸರಿಗೆ ದೂರು ನೀಡಲಾಗಿತ್ತು. ಬಳಿಕ ಕೃಷಿಹೊಂಡದಲ್ಲಿ ಶವಗಳು ಸಿಕ್ಕಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪತಿ, ಅನುಷಾಳ ಗುರುತು ಪತ್ತೆ ಮಾಡಿದ್ದಾನೆ. ಈ ಬಗ್ಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ