ಬೆಳಗಾವಿ: ಬೆಳಗಾವಿ ನಗರದಲ್ಲಿ ಅಮೆರಿಕದ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದ ಬೃಹತ್ ಸೈಬರ್ ವಂಚನೆ ಗ್ಯಾಂಗ್ ಅನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಒಂದು ಕಾಲ್ ಸೆಂಟರ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಜಾಲದಲ್ಲಿ 33 ಮಂದಿ ಶಾಮೀಲಾಗಿದ್ದು, ಪ್ರತಿದಿನ ನೂರಾರು ಕರೆಗಳ ಮೂಲಕ ಅಮೆರಿಕದಲ್ಲಿರುವ ಜನರಿಗೆ ಮೋಸ ಮಾಡುತ್ತಿದ್ದರು. ಈ ಗ್ಯಾಂಗ್ಗೆ ತಿಂಗಳಿಗೆ 18,000 ದಿಂದ 45,000 ರೂಪಾಯಿಗಳವರೆಗೆ ಸಂಬಳ ನೀಡಲಾಗುತ್ತಿತ್ತು ಮತ್ತು ಹೆಚ್ಚು ಹಣ ಎಗರಿಸಿಕೊಟ್ಟರೆ ಸಿಕ್ಕರೆ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಗ್ಯಾಂಗ್ ಹೇಗೆ ಬಲೆಗೆ ಬಿತ್ತು ಎಂಬುದನ್ನೂ ವಿವರಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಮಾಧ್ಯಮಗಳಿಗೆ ಮಾಹಿತಿ ನೀಡಿ, ಈ ಗ್ಯಾಂಗ್ ಕನಿಷ್ಠ ಆರು-ಏಳು ತಿಂಗಳಿನಿಂದ ಬೆಳಗಾವಿಯಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿತ್ತು. ಮಾರ್ಚ್ ತಿಂಗಳಿಂದ ಇವರಿಗೆ ಸಂಬಳ ನೀಡಲಾಗುತ್ತಿದೆ ಎಂಬ ದಾಖಲೆಗಳು ಲಭ್ಯವಾಗಿವೆ. ಅವರು ತಮ್ಮ ಜಾಲವನ್ನು ಇನ್ನಷ್ಟು ವಿಸ್ತರಿಸಲು ಮತ್ತು ಹೆಚ್ಚು ಜನರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಮುಂದಾಗಬಹುದಾಗಿದ್ದ ನೂರಾರು ವಂಚನೆಗಳನ್ನು ತಡೆಗಟ್ಟಲಾಗಿದೆ ಎಂದು ತಿಳಿಸಿದ್ದಾರೆ.
ಈ ವಂಚನೆ ಜಾಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿದ್ದುದರಿಂದ, ಪೊಲೀಸರು ಹಲವಾರು ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐಡೆಂಟಿಟಿ ಥೆಫ್ಟ್ ಮತ್ತು ಚೀಟಿಂಗ್ ಬೈ ಪರ್ಸೋನೇಶನ್ಗೆ ಸಂಬಂಧಿಸಿದ ಐಟಿ ಕಾಯ್ದೆಯ ಸೆಕ್ಷನ್ 66ಸಿ ಮತ್ತು 66ಡಿ ಅನ್ನು ಪ್ರಾರಂಭದಲ್ಲಿ ಅನ್ವಯಿಸಲಾಗಿತ್ತು. ಆದರೆ, ತನಿಖೆಯ ನಂತರ, ಅಪರಾಧಗಳು ಭಾರತದ ಹೊರಗೆ ನಡೆದಿರುವುದರಿಂದ ಐಟಿ ಕಾಯ್ದೆಯ ಸೆಕ್ಷನ್ 75 (ಜುರಿಸ್ಡಿಕ್ಷನ್ ಆಫ್ ಆಫೆನ್ಸ್ ಔಟ್ಸೈಡ್ ದಿ ಇಂಡಿಯಾ), ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 48 ಮತ್ತು 49 (ಅಬೆಟ್ಮೆಂಟ್ ಆಫ್ ಅಫೆನ್ಸಸ್ ಔಟ್ಸೈಡ್ ದಿ ಇಂಡಿಯಾ), ಮತ್ತು ಇಂಡಿಯನ್ ಟೆಲಿಕಮ್ಯುನಿಕೇಷನ್ ಆ್ಯಕ್ಟ್ನ ಸೆಕ್ಷನ್ 42 (ನೆಟ್ವರ್ಕ್ ಟ್ಯಾಂಪರಿಂಗ್ ಮತ್ತು ಅನಧಿಕೃತ ನೆಟ್ವರ್ಕ್ ಸ್ಥಾಪನೆ) ಅನ್ನು ಸಹ ಸೇರಿಸಲಾಗಿದೆ.
For More Updates Join our WhatsApp Group :
