ನವದೆಹಲಿ: ಕೋಲ್ಕತ್ತಾದ ಆರ್ಕೆ ಕರ್ ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ, ಪ್ರತಿಭಟನಾ ನಿರತರಾಗಿರುವ ವೈದ್ಯರಿಗೆ ಕೆಲಸಕ್ಕೆ ಮರಳುವಂತೆ ಸುಪ್ರೀಂಕೋರ್ಟ್ ತಿಳಿಸಿದೆ. ಅಲ್ಲದೇ ಕರ್ತವ್ಯಕ್ಕೆ ಮರಳುವ ವೈದ್ಯರ ಮೇಲೆ ಯಾವುದೇ ರೀತಿಯ ಶಿಸ್ತುಕ್ರಮ ಜರುಗಿಸದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದೆ.
ಕೋಲ್ಕತ್ತಾದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಕೊಲೆ ಪ್ರಕರಣದ ಪ್ರತಿಭಟನೆಗೆ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಏಮ್ಸ್ ನಾಗ್ಪುರದ ನಿವಾಸಿ ವೈದ್ಯರ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ತಿಳಿಸಿದರು.
ಒಮ್ಮೆ ನೀವು ಕರ್ತವ್ಯಕ್ಕೆ ಮರಳಿದರೆ, ಯಾವುದೇ ರೀತಿ ಕ್ರಮ ನಿಮ್ಮ ಮೇಲೆ ಆಗದಂತೆ ಭರವಸೆ ನೀಡುತ್ತೇವೆ. ಈ ಸಂಬಂಧ ಅಧಿಕಾರಿಗಳಿಗೆ ತಿಳಿಸುತ್ತೇವೆ. ವೈದ್ಯರುಗಳು ಕೆಲಸ ಮಾಡದೇ ಹೋದಲ್ಲಿ ಹೇಗೆ ಸಾರ್ವಜನಿಕ ಆರೋಗ್ಯ ಸೌಕರ್ಯಗಳು ಕಾರ್ಯ ನಿರ್ವಹಿಸಲಿವೆ ಎಂದು ಪೀಠ ಪ್ರಶ್ನಿಸಿತು.
ಯಾವುದಾದರೂ ತೊಂದರೆ ಆದಲ್ಲಿ ಬಳಿಕ ನಮ್ಮ ಬಳಿ ಬನ್ನಿ. ಆದರೆ ಅದಕ್ಕೂ ಮೊದಲು ಕರ್ತವ್ಯಕ್ಕೆ ಹಾಜರಾಗಿ ಎಂದು ಪೀಠ ತಿಳಿಸಿತು.
ಕೋಲ್ಕತ್ತಾದ ಆರ್ಕೆ ಕರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ಆರಂಭವಾದ ಪ್ರತಿಭಟನೆ ದೇಶಾದ್ಯಂತ ವ್ಯಾಪಿಸಿದೆ. ಈ ಹತ್ಯೆ ಪ್ರಕರಣದ ತನಿಖೆಯನ್ನು ಆಗಸ್ಟ್ 1ರಂದು ಕೋಲ್ಕತ್ತಾ ಹೈಕೋರ್ಟ್ ಸಿಬಿಐಗೆ ವಹಿಸಿತ್ತು.
ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಸುಮೊಟೋ ಪ್ರಕರಣ ದಾಖಲಿಸಿಕೊಂಡಿತ್ತು.
ಮಂಗಳವಾರದ ವಿಚಾರಣೆ ವೇಳೆ ಕೂಡ ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠವು, ದೇಶದೆಲ್ಲೆಡೆ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವೈದ್ಯ ವೃತ್ತಿಪರರಿಗೆ ಸಾಧ್ಯವಾದಷ್ಟು ಕೆಲಸಕ್ಕೆ ಮರಳುವಂತೆ ತಿಳಿಸಿತ್ತು.