ರಾಮನಗರ: ಭ್ರೂಣ ಹತ್ಯೆಮಾಡಿಸಿದ ಪ್ರಿಯಕರ ಹಾಗೂ ಆತನ ವಿರುದ್ಧ ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆಯೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ಮೂಲದ ಯುವತಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆರೋಪಿ ದಯಾನಂದ ತನ್ನನ್ನು ಪ್ರೀತಿಸಿ, ವಂಚಿಸಿದ್ದಾನೆ. ನಾನು ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಸಿ ಪರಾರಿಯಾಗಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳದೆ, ನನಗೆ ನ್ಯಾಯ ಕೊಡಿಸದೆ ಪೊಲೀಸರು ವಂಚಿಸಿದ್ದಾರೆ. ಆರೋಪಿ ದಯಾನಂದ ಮತ್ತು ಪೊಲೀಸರು ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಆರೋಪಿ ವಿರುದ್ಧ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ, ಪೊಲೀಸರು ದೂರು ಸ್ವೀಕರಿಸಿಲ್ಲ. ದಯಾನಂದನ ಸ್ನೇಹಿತ ದೂರು ಕೊಡಿಸುತ್ತೇನೆಂದು ಹೇಳಿ ನನ್ನಿಂದ 1.4 ಲಕ್ಷ ರೂ. ಲಂಚ ಕೊಡಿಸಿದ್ದಾನೆ. ಲಂಚ ಪಡೆದ ಮೇಲೂ ಪೊಲೀಸರು ಕ್ರಮ ಕೈಗೊಂಡಿಲ್ಲ. ನಾಲ್ಕು ತಿಂಗಳುಗಳಿಂದ ಪೊಲೀಸ್ ಠಾಣೆಗೆ ಅಲೆದು ಬೇಸತ್ತಿದ್ದೇನೆ.
ನನಗಾದ ಅನ್ಯಾಯಕಿಂತ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಶಿಕ್ಷೆ ಆಗಲೇಬೇಕು. ಹೀಗಾಗಿ ಆತನ ವಿರುದ್ಧ ಭ್ರೂಣಹತ್ಯೆ ಕೇಸ್ ದಾಖಲಿಸಿ ಕ್ರಮಕ್ಕೆ ಮಹಿಳೆ ಆಗ್ರಹಿಸಿದ್ದಾರೆ. ಪೊಲೀಸರು, ಪ್ರಿಯಕರನಿಂದ ವಂಚನೆಗೊಳಗಾಗಿರುವ ನನಗೆ ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿಯವರಿಗೆ ಮಹಿಳೆ ಬರೆದಿರುವ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪತ್ರವು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ.