LPG ಸಿಲಿಂಡರ್ ಕೊರತೆ: ಜನರು ಕಿಲೋಮೀಟರ್ಗಟ್ಟಲೆ ಸಾಲು.

LPG ಸಿಲಿಂಡರ್ ಕೊರತೆ: ಜನರು ಕಿಲೋಮೀಟರ್ಗಟ್ಟಲೆ ಸಾಲು.

ಏಜೆನ್ಸಿಗಳ ಮುಂದೆ ಕಿಲೋಮೀಟರ್ ಉದ್ದದ ಕ್ಯೂ!

ಬೆಂಗಳೂರು : ಕರ್ನಾಟಕದ ವಿವಿಧ ಕಡೆಗಳಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಮಸ್ಯೆ ತೀವ್ರಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಸಿಲಿಂಡರ್ ಕೊರತೆ ಎದ್ದು ಕಾಣುತ್ತಿದೆ. ಕಲಬುರಗಿ, ಆಳಂದ, ಬಳ್ಳಾರಿ, ಸಂಡೂರು ಮತ್ತು ದಾವಣಗೆರೆಯ ಜಗಳೂರಿನಲ್ಲಿ ಜನರು ಗ್ಯಾಸ್ ಸಿಲಿಂಡರ್‌ಗಳಿಗಾಗಿ ಪರದಾಡುತ್ತಿದ್ದಾರೆ. ಇಂಡಿಯನ್ ಗ್ಯಾಸ್ ಏಜೆನ್ಸಿಗಳ ಮುಂದೆ ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಕಂಡುಬಂದಿವೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರೂ ಸಹ ಸಿಲಿಂಡರ್ ಪಡೆಯಲು ಮಳೆ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಕಾಯುತ್ತಿದ್ದಾರೆ. ಖಾಲಿ ಸಿಲಿಂಡರ್‌ಗಳನ್ನು ಕಿಲೋಮೀಟರ್‌ಗಟ್ಟಲೆ ದೂರದಲ್ಲಿ ಇಟ್ಟು ಸರದಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಳ್ಳಾರಿಯ ಗಗನಶ್ರೀ ಇಂಡಿಯನ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ 15ರಿಂದ 18 ದಿನಗಳಿಂದ ಸಿಲಿಂಡರ್ ಪೂರೈಕೆಯಾಗದೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೆ ಏಜೆನ್ಸಿ ಸಿಬ್ಬಂದಿಯೇ ಮನೆಗೆ ಸಿಲಿಂಡರ್ ತಲುಪಿಸುತ್ತಿದ್ದರು. ಆದರೆ, ಈಗ ಗ್ರಾಹಕರು ನೇರವಾಗಿ ಏಜೆನ್ಸಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಅಡುಗೆ ಮಾಡಲು ಸಿಲಿಂಡರ್ ಇಲ್ಲದೆ, ಹೋಟೆಲ್‌ಗಳಲ್ಲಿ ದುಪ್ಪಟ್ಟು ಬೆಲೆ ತೆತ್ತು ಊಟ ಮಾಡಬೇಕಾದ ಅನಿವಾರ್ಯತೆ ಕುರಿತು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ಕೆಲವೆಡೆ ಸಿಲಿಂಡರ್ ಸ್ಟಾಕ್ ಬಂದ ತಕ್ಷಣ ಜನರು ಮುಗಿಬಿದ್ದು ಖರೀದಿಸಲು ಯತ್ನಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಏಜೆನ್ಸಿ ಮಾಲಿಕರೊಂದಿಗೆ ಗ್ರಾಹಕರ ಮಾತಿನ ಚಕಮಕಿ ಕಂಡುಬಂದಿದೆ.

ಕೆಲವು ಗ್ಯಾಸ್ ಏಜೆನ್ಸಿಗಳು ಈ ಪರಿಸ್ಥಿತಿಯ ಲಾಭ ಪಡೆದು ಬ್ಲಾಕ್ ಮಾರ್ಕೆಟ್‌ನಲ್ಲಿ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. 950 ರೂಪಾಯಿ ಬೆಲೆಯ ಸಿಲಿಂಡರ್‌ಗೆ ಹೆಚ್ಚುವರಿ 50 ರೂಪಾಯಿ ನೀಡಿ ಖರೀದಿಸಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಹಕರು ದೂರಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *