ಆಡಿಯೋ ವೈರಲ್ ವಿವಾದ.
ಮಂಡ್ಯ : ಮಾಜಿ ಸಂಸದ, ಕಾಂಗ್ರೆಸ್ ನಾಯಕ, ಕೆಪಿಸಿಸಿ ವಕ್ತಾರರೂ ಆಗಿರುವ ಎಲ್ಆರ್ ಶಿವರಾಮೇಗೌಡಗೆ ಆಡಿಯೋ ವೈರಲ್ ಪ್ರಕರಣ ತೀವ್ರ ಸಂಕಷ್ಟ ತಂದಿದೆ. ಇತ್ತೀಚೆಗೆ ವೈರಲ್ ಆಗಿರುವ ಆಡಿಯೋ ಒಂದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಶಿವರಾಮೇಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರೇ ಒತ್ತಾಯಿಸಿದ್ದಾರೆ. ಕಾರ್ಯಕರ್ತನೊಬ್ಬನೊಂದಿಗೆ ಪೋನ್ ಕರೆ ವೇಳೆ ನಡೆದಿದ್ದ ಮಾತುಕತೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ನಟ ದಿ. ಅಂಬರೀಶ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಂಸದ ಮಾದೇಗೌಡ ಸೇರಿದಂತೆ ಹಲವು ನಾಯಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಶಿವರಾಮೇಗೌಡ ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧವೂ ನಾಲಿಗೆ ಹರಿಬಿಟ್ಟಿರುವುದು ಕಾಂಗ್ರೆಸ್ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರಿಗೆ ಪತ್ರ ಬರೆದು, ಶಿವರಾಮೇಗೌಡ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪಕ್ಷದ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ ಕಾಂಗ್ರೆಸ್ ಪಕ್ಷದ ಗೌರವಕ್ಕೆ ಧಕ್ಕೆಯಾಗಿದ್ದು, ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಏತನ್ಮಧ್ಯೆ, ಆಡಿಯೋವನ್ನು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ. ಇದು ತನ್ನ ವಿರುದ್ಧ ಮಾಡಿರುವ ಷಡ್ಯಂತ್ರ ಎಂದು ಎಲ್.ಆರ್. ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದನ್ನು ಒಪ್ಪಲು ಮಂಡ್ಯದ ಕಾಂಗ್ರೆಸ್ ನಾಯಕರು ಸಿದ್ಧರಿಲ್ಲ. ಶಿವರಾಮೇಗೌಡ ಈ ಹಿಂದೆ ಜೆಡಿಎಸ್ನಲ್ಲಿದ್ದಾಗಲೂ ಇದೇ ರೀತಿಯ ಆಡಿಯೋ ವಿವಾದದ ಉಂಟಾಗಿತ್ತು. ಕೊನೆಗೆ ಎಕುಮಾರಸ್ವಾಮಿ ಅವರು ಶಿವರಾಮೇಗೌಡರನ್ನು ಪಕ್ಷದಿಂದ ಉಚ್ಚಾಟಿಸಿದ್ದರು ಎಂಬುದು ಗಮನಾರ್ಹ.
For More Updates Join our WhatsApp Group :




