ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಆಗಸ್ಟ್ 27ರಂದು ನಡೆಸಿದ ಗೆಜೆಟೆಡ್ ಪೆ್ರೂಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಪಿಎಸ್ಸಿಯಲ್ಲಿ ಬದಲಾವಣೆ ಬೇಕು, ಕೆಪಿಎಸ್ಸಿ ಮರು ಪರೀಕ್ಷೆಯನ್ನು ನಡೆಸಬೇಕು ಎಂಬ ಕೂಗು ಜೋರಾಗಿದೆ.
ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪು ಕನ್ನಡವನ್ನು ಖಂಡಿಸಿ, ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಸಹ ಹಮ್ಮಿಕೊಳ್ಳಲಾಗಿದೆ. ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿನ ಕನ್ನಡ ದೋಷದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಇದನ್ನು ಗಂಭೀರವಾಗಿ ಪರಿಗಣßಸಿದ್ದು, ಕೆಪಿಎಸ್ಸಿಯಿಂದ ವರದಿಯನ್ನು ಕೇಳಿದೆ.
ಮರು ಪರೀಕ್ಷೆ ನಡೆಸಿ: ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಸಂಘ (ರಿ) ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರವನ್ನು ಬರೆದಿದ್ದು, ಮರು ಪರೀಕ್ಷೆ ನಡೆಸಲು ಕೆಪಿಎಸ್ಸಿಗೆ ಸೂಕ್ತ ಆದೇಶವನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ. ಈ ಕುರಿತು ಒಕ್ಕೂಟದ ಅಧ್ಯಕ್ಷೆ ಭವ್ಯಾ ನರಸಿಂಹಮೂರ್ತಿ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಈ ಪತ್ರವು 2024ರ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕೆಪಿಎಸ್ಸಿ ಮಾಡಿರುವ ಲೋಪದೋಷಗಳು, ಘೋರ ಅನ್ಯಾಯ ಮತ್ತು ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮಾಡಿರುವ ದ್ರೋಹದ ಕುರಿತು ಎಂಬ ವಿಷಯ ಒಳಗೊಂಡಿದೆ. ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಸಂಘ (ರಿ)
ಅತೀ ಜರೂರಾಗಿ ತಮ್ಮ ಗಮನಕ್ಕೆ ತರುವುದೇನೆಂದರೆ, ದಿನಾಂಕ 27.08.2024 ರಂದು ಕೆಪಿಎಸ್ಸಿ ರಾಜ್ಯಾದ್ಯಂತ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಿದೆ. ಇದರಲ್ಲಿ ಕನ್ನಡ ಮಾಧ್ಯಮದಲ್ಲಿ ಬರೆಯುವ ಅಭ್ಯರ್ಥಿಗಳಿಗೆ ಸುಮಾರು 58 ಪ್ರಶ್ನೆಗಳನ್ನು ಸರಿಯಾಗಿ, ಅರ್ಥಗರ್ಭಿತವಾಗಿ ತರ್ಜುಮೆ/ ಅನುವಾದ/ ಭಾಷಾಂತರ ಮಾಡದೆ ಪ್ರಮಾದ ಎಸಗಿದೆ ಎಂದು ತಿಳಿಸಿದ್ದಾರೆ.