ಲಕ್ನೋ || ಬಲವಂತದ ಮದುವೆ; ವಿವಾಹವಾದ 2 ವಾರಗಳಲ್ಲೇ ಪ್ರಿಯಕರನ ಜೊತೆಗೆ ಸೇರಿ ಪತಿ ಹ* ಮಾಡಿಸಿದ ಮಹಿಳೆ

ಲಕ್ನೋ || ಬಲವಂತದ ಮದುವೆ; ವಿವಾಹವಾದ 2 ವಾರಗಳಲ್ಲೇ ಪ್ರಿಯಕರನ ಜೊತೆಗೆ ಸೇರಿ ಪತಿ ಹ* ಮಾಡಿಸಿದ ಮಹಿಳೆ

ಲಕ್ನೋ: ಮದುವೆಯಾದ 2 ವಾರದಲ್ಲೇ ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳಾದ ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಯನ್ನು ಪೋಷಕರು ಒಪ್ಪಲಿಲ್ಲ. ಮಾ.5 ರಂದು ಪ್ರಗತಿಯನ್ನು ದಿಲೀಪ್ ಎಂಬಾತನ ಜೊತೆ ಬಲವಂತವಾಗಿ ಮದುವೆ ಮಾಡಿದರು.

ಮದುವೆಯಾಗಿ ಕೇವಲ ಎರಡು ವಾರಗಳಷ್ಟೇ ಕಳೆದಿತ್ತು. ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ, ಯೋಜನೆ ರೂಪಿಸಿ ಗಂಡನನ್ನು ಹತ್ಯೆ ಮಾಡಿಸಿದ್ದಾರೆ. ಪತಿ ಕೊಲೆ ಮಾಡಲು ವ್ಯಕ್ತಿಯೊಬ್ಬನಿಗೆ 2 ಲಕ್ಷ ರೂ. ಸುಪಾರಿ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ

ಗುಂಡೇಟಿನಿಂದ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದ ದಿಲೀಪ್‌ನನ್ನು ಪೊಲೀಸರು ಗುರುತಿಸಿದ್ದರು. ತಕ್ಷಣ ಆತನನ್ನು ಬಿಧುನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ, ಸೈಫೈ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಕರೆದೊಯ್ಯಲಾಯಿತು. ಕೊನೆಗೆ ಔರೈಯಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ದಿಲೀಪ್‌ ಕೊನೆಯುಸಿರೆಳೆದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‌

ಈ ಸಂಬಂಧ ಮೃತ ವ್ಯಕ್ತಿಯ ಸಹೋದರ ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತನ ಪತ್ನಿ ಮತ್ತು ಆಕೆಯ ಪ್ರೇಮಿ ಮದುವೆಯ ನಂತರ ಭೇಟಿಯಾಗಲು ಸಾಧ್ಯವಾಗದ ಕಾರಣ, ಇಬ್ಬರೂ ಸೇರಿಕೊಂಡು ದಿಲೀಪ್‌ನನ್ನು ಕೊಲ್ಲಲು ನಿರ್ಧರಿಸಿದ್ದರೆಂಬುದು ತನಿಖೆಯಿಂದ ತಿಳಿದುಬಂದಿದೆ. ಇಬ್ಬರೂ ದಿಲೀಪ್‌ನನ್ನು ಕೊಲೆ ಮಾಡಲು ರಾಮಾಜಿ ಚೌಧರಿ ಎಂಬ ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿದ್ದರು. ಕೊಲೆ ಮಾಡಲು ಅವನಿಗೆ 2 ಲಕ್ಷ ರೂ.ಗಳನ್ನು ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಮಾಜಿ ಮತ್ತು ಇತರ ಕೆಲವರು, ದಿಲೀಪ್‌ನನ್ನು ಬೈಕ್‌ನಲ್ಲಿ ಹೊಲಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನಂತರ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಗುರುತಿಸಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು, ನಾಲ್ಕು ಲೈವ್ ಕಾರ್ಟ್ರಿಡ್ಜ್‌ಗಳು, ಒಂದು ಬೈಕ್, ಎರಡು ಮೊಬೈಲ್ ಫೋನ್‌ಗಳು, ಒಂದು ಪರ್ಸ್, ಆಧಾರ್ ಕಾರ್ಡ್ ಮತ್ತು 3,000 ರೂ.ಗಳನ್ನು ವಶಪಡಿಸಿಕೊಂಡಿದ್ದರು.

Leave a Reply

Your email address will not be published. Required fields are marked *