ಲಕ್ನೋ: ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಘಟನೆ ಮೀರತ್ನ ಬ್ರಹ್ಮಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆಯ ನಂತರ ಶವವನ್ನು ಮನೆಯಲ್ಲಿದ್ದ ದೊಡ್ಡ ಡ್ರಮ್ನಲ್ಲಿ ಬಚ್ಚಿಟ್ಟು ಅದರ ಮೇಲೆ ಕಬ್ಬಿಣದ ಮುಚ್ಚಳವನ್ನು ಸಿಮೆಂಟ್ನಿಂದ ಮುಚ್ಚಲಾಗಿರುವ ಭಯಾನಕ ಘಟನೆ ನಡೆದಿದೆ.

29 ವರ್ಷದ ಸೌರಭ್ ರಜಪೂತ್ ಮೃತ ದುರ್ದೈವಿ. ಇವರು ಖಾಸಗಿ ಹಡಗು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಮುಸ್ಕಾನ್ (27) ಮತ್ತು ಆರು ವರ್ಷದ ಮಗಳೊಂದಿಗೆ ಬ್ರಹ್ಮಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂದ್ರಾನಗರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸೌರವ್ ಮತ್ತು ಮುಸ್ಕಾನ್ ಪ್ರೇಮ ವಿವಾಹವಾಗಿದ್ದರು.
ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಸೌರವ್ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಆಚರಿಸಲು ಫೆಬ್ರವರಿಯಲ್ಲಿ ರಜೆಯ ಮೇಲೆ ಮೀರತ್ಗೆ ಬಂದಿದ್ದರು. ಆದರೆ ಸೌರವ್ ಪತ್ನಿ ಸಾಹಿಲ್ (25) ಎಂಬ ಯುವಕನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು. ಇಬ್ಬರ ನಡುವಿನ ಆತ್ಮೀಯತೆ ಎಷ್ಟು ಹೆಚ್ಚಾಗಿತ್ತೆಂದರೆ ಅವರು ಸೌರವ್ ನನ್ನು ಕೊಲ್ಲಲು ಹಿಂದೆ ಮುಂದೆ ನೋಡಿಲ್ಲ. ತಮ್ಮಿಬ್ಬರ ಪ್ರೀತಿಗೆ ಸೌರವ್ ಅಡ್ಡಿಯಾಗಬಹುದು ಎನ್ನುವ ಕಾರಣಕ್ಕೆ ಮುಸ್ಕಾನ್ ಹಾಗೂ ಸಾಹಿಲ್ ಒಟ್ಟಾಗಿ ಸೇರಿ ಆತನನ್ನು ಕೊಲೆ ಮಾಡಿದ್ದಾರೆ. ಕೊಲೆಯ ನಂತರ ದೇಹವನ್ನು ತುಂಡಾಗಿಸಿ ದೊಡ್ಡ ಡ್ರಮ್ನಲ್ಲಿ ಲಾಕ್ ಮಾಡಿ ಅದರ ಮೇಲೆ ಕಬ್ಬಿಣದ ಮುಚ್ಚಳವನ್ನು ಇರಿಸಿ ಸಿಮೆಂಟ್ನಿಂದ ಸಂಪೂರ್ಣವಾಗಿ ಮುಚ್ಚಿದ್ದಾರೆ. ಸೌರವ್ ನಾಪತ್ತೆಯಾಗಿರುವುದು ಯಾರಿಗೂ ಅನುಮಾನ ಬಾರದಂತೆ ಮುಸ್ಕಾನ್, ಸೌರವ್ ಫೋನ್ನಿಂದ ಸೌರವ್ ಕುಟುಂಬಕ್ಕೆ ಸಂದೇಶ ಕಳುಹಿಸುತ್ತಿದ್ದಳು. ಅಷ್ಟೇ ಅಲ್ಲ ಸಾಹಿಲ್ ಸೌರವ್ ಕುಟುಂಬಕ್ಕೆ ಕರೆ ಮಾಡಿ ಮಾತನಾಡುತ್ತಿದ್ದ. ಆದರೆ ಸೌರವ್ ಹಲವು ದಿನಗಳವರೆಗೆ ಕಾಣದಿದ್ದಾಗ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಸೌರಭ್ ಮಾ. 4ರಿಂದ ನಾಪತ್ತೆಯಾಗಿದ್ದರು.
ಈ ಎಲ್ಲಾ ಘಟನೆಗಳ ನಡುವೆ ಮುಸ್ಕಾನ್ ತಂದೆಗೆ ಘಟನೆಯ ಬಗ್ಗೆ ಸುಳಿವು ಸಿಕ್ಕಿದೆ. ಅವರು ಪೊಲೀಸರಿಗೆ ವಿಷಯ ತಿಳಿಸಿದಾಗ ತಮ್ಮ ಮಗಳ ಅಪರಾಧ ಬಯಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಡ್ರಿಲ್ ಯಂತ್ರವನ್ನು ಬಳಸಿ ಡ್ರಮ್ ಕತ್ತರಿಸಿ ಶವವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ನನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಗರ ಎಸ್ಪಿ ಆಯುಷ್ ವಿಕ್ರಮ್ ಸಿಂಗ್, ‘ಬ್ರಹ್ಮಪುರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮೃತ ಪತಿಯ ಶವವನ್ನು ಆರೋಪಿ ಪತ್ನಿ ಮತ್ತು ಆಕೆಯ ಪ್ರೇಮಿ ದೊಡ್ಡ ಡ್ರಮ್ನೊಳಗೆ ಬಚ್ಚಿಟ್ಟು ಸಿಮೆಂಟ್ನಿಂದ ಮುಚ್ಚಿರುವುದು ಕಂಡುಬಂದಿದೆ. ಶವವನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಪಿ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಅವರನ್ನು ಬಂಧಿಸಲಾಗಿದೆ’ ಎಂದು ಎಸ್ಪಿ ಸಿಟಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.