ಹೊಸ ಮಾರ್ಗದಲ್ಲಿ ಐಷಾರಾಮಿ ಬಸ್: ದರ, ವೇಳಾಪಟ್ಟಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ವಿವಿಧ ಮಾರ್ಗದಲ್ಲಿ ಐಷಾರಾಮಿ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ಗಳು ರಾಜ್ಯ ಮತ್ತು ಅಂತರರಾಜ್ಯಕ್ಕೆ ಸಂಚಾರ ನಡೆಸಲಿವೆ. ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ವೇಳಾಪಟ್ಟಿ, ದರವನ್ನು ಪ್ರಕಟಿಸಲಾಗಿದೆ.

ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿವಿಧ ಮಾರ್ಗದಲ್ಲಿ ಐಷಾರಾಮಿ ಬಸ್ ಸೇವೆಯನ್ನು ಆರಂಭಿಸಿದೆ. ಇವುಗಳಲ್ಲಿ ವೋಲ್ವೋ ಎಸಿ ಸ್ಲೀಪರ್ ಬಸ್, ಐರಾವತ ಕ್ಲಬ್ ಕ್ಲಾಸ್, ನಾನ್ ಎಸಿ ಸ್ಲೀಪರ್ ಬಸ್ಗಳು ಸೇರಿವೆ. ಪ್ರಯಾಣಿಕರು ಮುಂಗಡ ಟಿಕೆಟ್ ಬುಕ್ ಮಾಡಿಕೊಂಡು ಸಂಚಾರ ನಡೆಸಬಹುದು.

ವಾ.ಕ.ರ.ಸಾ.ನಿ ಆರಂಭಿಸಿರುವ ಐಷಾರಾಮಿ ಬಸ್ಗಳು ಬೆಳಗಾವಿ-ನಾಸಿಕ್, ಹುಬ್ಬಳ್ಳಿ-ಪಿಂಪ್ರಿ, ಬೆಳಗಾವಿ-ಹೈದರಾಬಾದ್ ಮತ್ತು ಗೋಕಾಕ್-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣಿಕರು ಆನ್ಲೈನ್ ಟಿಕೆಟ್ ಬುಕಿಂಗ್ಗಾಗಿ https://ksrtc.in ವೆಬ್ಸೈಟ್ಗೆ ಭೇಟಿ ನೀಡಬಹುದು.

ಬಸ್ ವೇಳಾಪಟ್ಟಿ, ದರದ ಮಾಹಿತಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೆಳಗಾವಿ ಮತ್ತು ಮಹಾರಾಷ್ಟ್ರದ ನಾಸಿಕ್ ನಡುವೆ ಮಲ್ಟಿಆಕ್ಸೆಲ್ ವೋಲ್ವೋ ಅಂಬಾರಿ ಉತ್ಸವ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ.

ಬೆಳಗಾವಿಯಿಂದ ಬಸ್ 17:30ಕ್ಕೆ ಹೊರಟು, ನಾಸಿಕ್ ಅನ್ನು 05:45ಕ್ಕೆ ತಲುಪಲಿದೆ. ನಾಸಿಕ್ನಿಂದ ಬಸ್ 18:00ಕ್ಕೆ ಹೊರಟು, ಬೆಳಗಾವಿಯನ್ನು 06:00ಕ್ಕೆ ತಲುಪಲಿದೆ. ಈ ಬಸ್ ಸಂಕೇಶ್ವರ ನಿಪ್ಪಾಣಿ ಮಾರ್ಗವಾಗಿ ಸಂಚಾರ ನಡೆಸಲಿದೆ. ಈ ಬಸ್ ಪ್ರಯಾಣ ದರ 1400 ರೂ.ಗಳು ಎಂದು ನಿಗದಿ ಮಾಡಲಾಗಿದೆ.

* ಹುಬ್ಬಳ್ಳಿ-ಪಿಂಪ್ರಿ ನಡುವೆ ಐರಾವತ ಕ್ಲಬ್ ಕ್ಲಾಸ್ ಐಷಾರಾಮಿ ಬಸ್ ಪ್ರತಿದಿನ ಸಂಚಾರ ನಡೆಸಲಿದೆ. ಈ ಬಸ್ ಹುಬ್ಬಳ್ಳಿಯಿಂದ 22:15ಕ್ಕೆ ಬಿಟ್ಟು ಪಿಂಪ್ರಿಯನ್ನು 22:15ಕ್ಕೆ ತಲುಪಲಿದೆ. ಬಸ್ ಧಾರವಾಡ, ಬೆಳಗಾವಿ, ಕೊಲ್ಹಾಪುರ, ಪುಣೆ ಮಾರ್ಗವಾಗಿ ಸಂಚಾರ ನಡೆಸಲಿದೆ.

* ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೆಳಗಾವಿಯಿಂದ ಅಂತರರಾಜ್ಯ ಬಸ್ ಸೇವೆಯನ್ನು ಆರಂಭಿಸಿದೆ. ಬೆಳಗಾವಿ ಮತ್ತು ತೆಲಂಗಾಣದ ಹೈದರಾಬಾದ್ ನಡುವೆ ಐರಾವತ ಕ್ಲಬ್ ಕ್ಲಾಸ್ ಬಸ್ ಪ್ರತಿದಿನ ಸಂಚಾರವನ್ನು ನಡೆಸಲಿದೆ. ಬಸ್ ಬೆಳಗಾವಿಯನ್ನು 19:00 ಬಿಟ್ಟು, ಹೈದರಾಬಾದ್ ಅನ್ನು 20:15ಕ್ಕೆ ತಲುಪಲಿದೆ. ಈ ಬಸ್ ಯರಗಟ್ಟಿ, ಲೋಕಾಪುರ, ಮುಧೋಳ, ಜಮಖಂಡಿ, ವಿಜಯಪುರ, ಕಲಬುರಗಿ, ಹುಮ್ನಾಬಾದ್ ಮೂಲಕ ಸಂಚಾರ ನಡೆಸಲಿದೆ. ಬಸ್ ಪ್ರಯಾಣ ದರ 1283 ರೂ.ಗಳು.

* ಗೋಕಾಕ ಮತ್ತು ಬೆಂಗಳೂರು ನಡುವೆ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಗೋಕಾಕದಿಂದ ಬಸ್ 20:15ಕ್ಕೆ ಬಿಟ್ಟು, ಬೆಂಗಳೂರು ನಗರವನ್ನು 07:30ಕ್ಕೆ ತಲುಪಲಿದೆ. ಬೆಂಗಳೂರು ನಗರವನ್ನು 20:30ಕ್ಕೆ ಬಿಟ್ಟು ಗೋಕಾಕವನ್ನು 08:00 ತಲುಪಲಿದೆ. ಈ ಬಸ್ ಯುರಗಟ್ಟಿ, ಸವದತ್ತಿ, ಧಾರವಾಡ ಮತ್ತು ಹುಬ್ಬಳ್ಳಿ ಮೂಲಕ ಸಂಚಾರವನ್ನು ನಡೆಸಲಿದೆ. ಈ ಮಾರ್ಗದ ಪ್ರಯಾಣ ದರ 933 ರೂ. ಎಂದು ನಿಗದಿ ಮಾಡಲಾಗಿದೆ.

Leave a Reply

Your email address will not be published. Required fields are marked *