ಮುಂಬೈ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಘೋಷಣೆಯಾಗಲಿದೆ.
ಸದ್ಯ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ‘ಮಹಾಯತಿ’ ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದೆ. ಶಿವಸೇನೆಯ ಏಕನಾಥ್ ಶಿಂಧೆ ಮುಖ್ಯಮಂತ್ರಿಗಳು.
ಮಹಾರಾಷ್ಟ್ರ ಚುನಾವಣೆಯನ್ನು ಬಿಜೆಪಿ, ಕಾಂಗ್ರೆಸ್ ಏಕಾಂಗಿಯಾಗಿ ಎದುರಿಸುತ್ತಿಲ್ಲ. ಬಿಜೆಪಿ ಆಡಳಿತ ಪಕ್ಷವಾದ ‘ಮಹಾಯತಿ’ ಮೈತ್ರಿಕೂಟ, ಕಾಂಗ್ರೆಸ್ ವಿರೋಧ ಪಕ್ಷವಾದ ‘ಮಹಾವಿಕಾಸ್ ಅಘಾಡಿ’ ಮೈತ್ರಿಕೂಟದ ಜೊತೆ ಇದೆ. ಸೀಟು ಹಂಚಿಕೆ ಮಾಡಿಕೊಂಡು ಉಭಯ ಪಕ್ಷಗಳು ಚುನಾವಣೆಯನ್ನು ಎದುರಿಸುತ್ತಿದ್ದು, ಚುನಾವಣಾ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿವೆ.
ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿರುವ ‘ಮಹಾಯುತಿ’ ಮೈತ್ರಿಕೂಟ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮಹಿಳೆಯರು, ಯುವಕರು ಮತ್ತು ರೈತರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ, ಇದು ಚುನಾವಣೆಯಲ್ಲಿ ಹೇಗೆ ಸಹಾಯಕವಾಗಲಿದೆ? ಎಂದು ಕಾದು ನೋಡಬೇಕು.
ಪ್ರಣಾಳಿಕೆಯ ಮುಖ್ಯಾಂಶಗಳು: ಮಹಾಯತಿ, ಎಂವಿಎ ಮೈತ್ರಿಕೂಟ ಹಲವು ಘೋಷಣೆಗಳ ಮೂಲಕ ಮಹಿಳೆಯರು, ರೈತರು ಮತ್ತು ಯುವಕರನ್ನು ಸೆಳೆಯಲು ಮುಂದಾಗಿವೆ. ಮಹಾಯತಿ ಮೈತ್ರಿಕೂಟ ಲಡ್ಕಿ ಬಹಿನ್ ಯೋಜನೆ ಬಗ್ಗೆ ಅಪಾರವಾದ ನಿರೀಕ್ಷೆಯನ್ನು ಹೊಂದಿದೆ. ಈಗಾಗಲೇ ಸರ್ಕಾರ 21 ರಿಂದ 65 ವರ್ಷದ ಮಹಿಳೆಯರಿಗೆ ಮಾಸಿಕ 1,500 ರೂ. ಆರ್ಥಿಕ ಸಹಾಯ ನೀಡುವ ಯೋಜನೆ ಜಾರಿಗೊಳಿಸಿದೆ. ಆದರೆ ಪಕ್ಷದ ಪ್ರಣಾಳಿಕೆಯನ್ನು ಮಾಸಿಕ ಆರ್ಥಿಕ ಸಹಾಯವನ್ನು 2,100 ರೂ.ಗಳಿಗೆ ಹೆಚ್ಚಿಸುವುದಾಗಿ ಭರವಸೆ ನೀಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂವಿಎ ಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಪಕ್ಷ ಮಹಿಳೆಯರಿಗೆ ಮಾಸಿಕ 3 ಸಾವಿರ ರೂ. ಆರ್ಥಿಕ ಸಹಾಯ ನೀಡುವುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ ಎರಡೂ ಮೈತ್ರಿಕೂಟಗಳು ಮಹಿಳೆಯರ ಮತಗಳನ್ನು ಸೆಳೆಯಲು ಘೋಷಣೆಗಳನ್ನು ಮಾಡಿವೆ.
ಮಹಾಯತಿ ಮೈತ್ರಿಕೂಟ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಭರವಸೆ ಕೊಟ್ಟಿದೆ. ಆಹಾರ ಭದ್ರತೆ ಒದಗಿಸಲು ಕ್ರಮ, ರೈತರಿಗೆ ಮನೆ ನಿರ್ಮಾಣಕ್ಕೆ ಸಹಕಾರದ ಭರವಸೆ ನೀಡಲಾಗಿದೆ. ಎಂವಿಎ ಮೈತ್ರಿಕೂಟ ಸರಿಯಾದ ಸಮಯಕ್ಕೆ ಸಾಲ ತೀರಿಸುವ ರೈತರಿಗೆ 50,000 ರೂ. ನೀಡುವ ಭರವಸೆಯನ್ನು ಕೊಟ್ಟಿದೆ.
ನಿರುದ್ಯೋಗಿ ಯುವಕ/ ಯುವತಿಯರಿಗೆ ಮಾಸಿಕ 4,000 ರೂ. ಆರ್ಥಿಕ ಸಹಾಯ ನೀಡಲಾಗುತ್ತದೆ ಎಂದು ಎಂವಿಎ ಮೈತ್ರಿಕೂಟ ಭರವಸೆ ನೀಡಿದೆ. ಅದೇ ಮಹಾಯತಿ ಮೈತ್ರಿಕೂಟ ಮಾಸಿಕ 10,000 ಸ್ಟೈ ಫಂಡ್ ನೀಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಿದೆ.
ಕಾಂಗ್ರೆಸ್ ಪಕ್ಷ ಮತ್ತು ಅದರ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿ ನಾಯಕರು ಮಹಾರಾಷ್ಟ್ರ ರಾಜ್ಯದಲ್ಲಿ ಜನರಿಗೆ ನೀಡಿದ ಭರವಸೆಗಳಲ್ಲಿ ಉಚಿತ ಅಕ್ಕಿ, ಮತಾಂತರ ತಡೆಗೆ ಬಲಿಷ್ಠ ಕಾನೂನು ರೂಪಿಸುವುದು ಸೇರಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 147. ಒಂದೇ ಪಕ್ಷದ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸಮೀಕ್ಷೆಗಳಿಂದ ಖಚಿತವಾಗಿದೆ. ಆದರೆ ಯಾವ ಮೈತ್ರಿಕೂಟ ಅಧಿಕಾರ ಪಡೆಯಲಿದೆ? ಎಂದು ಕಾದು ನೋಡಬೇಕಿದೆ.