ವಿಜಯ್ ದೇವರಕೊಂಡ ಸೂಪರ್ ಹಿಟ್ ಸಿನಿಮಾಗಳ ಜೊತೆಗೆ ಸಮಾಜ ಸೇವೆಯಿಂದಲೂ ಹೆಸರುವಾಸಿ. ಬಹುಬೇಡಿಕೆ ನಟ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಿಟ್ ಫ್ಲಾಪ್ಗಳೆನ್ನದೇ ಸಿನಿಮಾಗಳನ್ನು ಕೊಡುತ್ತಾ, ಅಭಿಮಾನಿಗಳನ್ನು ರಂಜಿಸೋ ಕೆಲಸ ಮುಂದುವರಿಸಿದ್ದಾರೆ.
ವಿಜಯ್ ಉತ್ತಮ ಅಭಿನಯದ ಜೊತೆ ಜೊತೆಗೆ ಮಾನವೀಯ ಕಾರ್ಯಗಳಲ್ಲೂ ಮುಂದಿದ್ದಾರೆ. ಲಾಕ್ಡೌನ್ ಸಂದರ್ಭ ತಮ್ಮ ಸೇವಾ ಫೌಂಡೇಶನ್ನಿಂದ ಅನೇಕರಿಗೆ ಸಹಾಯ ಹಸ್ತ ಚಾಚಿದ್ದಾರೆ ಕೂಡಾ. ಅಗತ್ಯ ವಸ್ತುಗಳನ್ನು ವಿತರಿಸಿದ್ದರು. ನಂತರ ಈ ಸಮಾಜ ಸೇವೆ ಹೀಗೆ ಮುಂದುವರಿಯಿತು. ‘ಖುಷಿ’ ಸಿನಿಮಾ ಯಶಸ್ಸಿನ ನಂತರ 100 ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿಯಂತೆ 1 ಕೋಟಿ ರೂ. ನೀಡಿದ್ದರು
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿಜಯ್ ಅವರ ಮಾನವೀಯ ಕಾರ್ಯಗಳು ಬೆಳಕಿಗೆ ಬಂದಿದೆ. ನಟನ ಮಹಾಕಾರ್ಯಗಳ ಬಗ್ಗೆ ಮಾತನಾಡುತ್ತಾ ಮಂಗಳಮುಖಿಯೋರ್ವರು ಕಣ್ಣೀರಿಟ್ಟಿದ್ದಾರೆ. ಕಾರ್ಯಕ್ರಮಕ್ಕೆ ವಿಜಯ್ ಅತಿಥಿಯಾಗಿ ಭಾಗವಹಿಸಿದ್ದು, ಸಹಾಯ ಪಡೆದವರ ಪೈಕಿ ಕೆಲವರು ವೇದಿಕೆಗೆ ಬಂದು ಧನ್ಯವಾದ ಅರ್ಪಿಸಿದ್ದಾರೆ. ಕಾರ್ಯಕ್ರಮದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಟ್ರಾನ್ಸ್ಜೆಂಡರ್ ಓರ್ವರು, “ನಾನು ಮಂಗಳಮುಖಿ ಸರ್. ನಿಮಗೆ ಧನ್ಯವಾದ ಅರ್ಪಿಸಲು ಎರಡು ವರ್ಷಗಳಿಂದ ಕಾಯುತ್ತಿದ್ದೆ. ಭಿಕ್ಷಾಟನೆ ನಮ್ಮ ಜೀವನೋಪಾಯ. ಆದರೆ ಲಾಕ್ಡೌನ್ ಸಂದರ್ಭ ಮನೆಗೆ ಸೀಮಿತವಾದ ನಾವು ಹಲವು ಸವಾಲುಗಳನ್ನೆದುರಿಸಿದೆವು. ಆ ಸನ್ನಿವೇಶ ನಮಗೆ ಬಹಳ ಕಷ್ಟಕರ ಎನಿಸಿತು. ಗೂಗಲ್ನಲ್ಲಿ ದೇವರಕೊಂಡ ಫೌಂಡೇಶನ್ ಕಂಡುಕೊಂಡೆವು. ಸಹಾಯಕ್ಕೆ ಅರ್ಜಿ ಸಲ್ಲಿಸಿದೆವು. ಕೇವಲ 16 ನಿಮಿಷಗಳಲ್ಲಿ ನನಗೆ ಕರೆ ಬಂತು. ನನ್ನಂತ ಹಲವರಿಗೆ ನಿಮ್ಮ ಫೌಂಡೇಶನ್ನಿಂದ ಸಹಾಯವಾಗಿದೆ. ದೇವರು ನಿಮ್ಮಲ್ಲಿದ್ದಾರೆ ಎಂದು ತೋರುತ್ತದೆ” ಎಂದು ಹೇಳಿ ಭಾವುಕರಾಗಿ ಕಣ್ಣೀರಿಟ್ಟರು.