ಮಂಗಳೂರು || ಜೈಲಿನಲ್ಲೇ ಹಫ್ತಾ ವಸೂಲಿ! ಸಹ ಕೈದಿಗೆ ಹ*ಲ್ಲೆ: ನಾಲ್ವರು ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ FIR.

ಜೈಲಿನಲ್ಲೇ ಹಫ್ತಾ ವಸೂಲಿ! ಸಹ ಕೈದಿಗೆ ಹ*ಲ್ಲೆ: ನಾಲ್ವರು ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ FIR.

ಮಂಗಳೂರು: ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಪೊಲೀಸರ ನಿಯಂತ್ರಣಕ್ಕೆ ಬಂದಿದೆ. ನಗರ ಪೊಲೀಸ್ ಕಮಿಷನರ್ ಆಗಿ ಖಡಕ್ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕರಿಸಿದ ಬಳಿಕ ಕ್ರಿಮಿನಲ್ಗಳನ್ನು ಹೆಡೆಮುರಿ ಕಟ್ಟಲಾಗುತ್ತಿದೆ. ಇದರ ಜೊತೆ ಕ್ರಿಮಿನಲ್ಗಳ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದು, ಇದೀಗ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ.

ಇತ್ತಿಚೇಗೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸಹ ಕೈದಿಗೆ ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆಯಿಟ್ಟು ಇಪ್ಪತ್ತು ಸಾವಿರ ರೂಪಾಯಿ ಹಫ್ತಾ ವಸೂಲಿ ಮಾಡಿದ ನಾಲ್ವರು ಆರೋಪಿಗಳ ವಿರುದ್ದ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಜೈಲು ಒಳಗಡೆಯೆ ಹಫ್ತಾ ವಸೂಲಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್ ಸುಧೀರ್ ಕುಮಾರ್, ಆರೋಪಿತ ನಾಲ್ವರು ಕೈದಿಗಳಾದ ಧನು ಯಾನೆ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದಿಲೇಶ್ ಬಂಗೇರ ಯಾನೆ ದಿಲ್ಲು, ಲಾಯಿ ವೇಗಸ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಕೋಕಾ ಕಾಯ್ದೆ ಎಂದರೇನು?

ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಥವಾ ಕೆ-ಕೋಕಾ ಕಾಯ್ದೆ 2000ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದು ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದ ಕಾನೂನಾಗಿದೆ.

ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಇರುವ ಮಾನದಂಡವೇನು?

ಎರಡು ಪ್ರಕರಣಗಳಲ್ಲಿ ಶಾಮೀಲಾದ ಆರೋಪಿಗಳು ಮತ್ತೆ ಅಪರಾಧ ಕೃತ್ಯಗಳನ್ನು ಎಸಗಿದರೆ ಅವರ ವಿರುದ್ದ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡುವ ಅವಕಾಶ ಕಾನೂನಿನಲ್ಲಿದೆ.

ಕೋಕಾ ಕಾಯ್ದೆಯಡಿ ಪ್ರಕರಣ: ಆರೋಪ ಸಾಬೀತಾದರೆ ಶಿಕ್ಷೆ ಏನು?

ಕೆ-ಕೋಕಾ ಕಾಯ್ದೆಯಡಿ ಕನಿಷ್ಠ ಐದು ವರ್ಷ ಶಿಕ್ಷೆ ವಿಧಿಸಲು ಅವಕಾಶವಿದ್ದು, ಗರಿಷ್ಠ ಜೀವಾವಧಿ ಶಿಕ್ಷೆವರೆಗೂ ವಿಸ್ತರಿಸಬಹುದಾಗಿದೆ. ಈ ಕ್ರಿಮಿನಲ್ ಗ್ಯಾಂಗ್ ಸದಸ್ಯರಾಗಿದ್ದವರ ಮೇಲೂ ಕನಿಷ್ಠ ಐದು ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಹೀಗಾಗಿ ಯಾರು ಸಹ ಪ್ರಕರಣದಲ್ಲಿ ಶಾಮೀಲಾದವರ ಜೊತೆ ತಿರುಗಾಡಬೇಡಿ ಎಂದು ಪೊಲೀಸ್ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಅಂಥವರ ಜತೆ ಸೇರಿಕೊಂಡರೆ ಜೈಲಿಗೆ ಹೋಗಬೇಕಾಗಲಿದೆ. ಮಾತ್ರವಲ್ಲದೇ ಅಷ್ಟು ಸುಲಭವಾಗಿ ಜಾಮೀನು ಪಡೆದು ಹೊರಗೆ ಬರುವುದೂ ಸಾಧ್ಯವಿಲ್ಲ.

Leave a Reply

Your email address will not be published. Required fields are marked *