‘ಗುಸ್ಕೋರ್ ಪಂಡತ್’ ಹೆಸರು ಬ್ರಾಹ್ಮಣ ಸಮುದಾಯಕ್ಕೆ ಅವಮಾನವೆಂದು ಆಕ್ರೋಶ.
ಸಿನಿಮಾಗಳು ವಿವಾದಕ್ಕೆ ಸಿಲುಕುವುದು ತೀರ ಸಾಮಾನ್ಯ ಆಗಿಬಿಟ್ಟಿದೆ. ಸಿನಿಮಾಗಳಲ್ಲಿ ಜಾತಿ, ಧರ್ಮ, ಸಮುದಾಯ, ವೃತ್ತಿಯ ಅಪಮಾನ ಮಾಡಲಾಗಿದೆ ಎಂಬ ದೂರು ಇತ್ತೀಚೆಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇದೇ ಸಾಲಿಗೆ ಖ್ಯಾತ ನಟ ಮನೋಜ್ ಬಾಜಪೇಯಿ ನಟನೆಯ ಸಿನಿಮಾ ಸಹ ಸೇರಿಕೊಂಡಿದೆ. ಮನೋಜ್ ನಟನೆಯ ಹೊಸ ಸಿನಿಮಾ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಹೆಸರಿನ ಬಗ್ಗೆ ಇದೀಗ ಆಕ್ರೋಶ ವ್ಯಕ್ತವಾಗಿದೆ. ಸಿನಿಮಾದ ಹೆಸರು ಬದಲಾವಣೆ ಮಾಡದಿದ್ದಲ್ಲಿ ಸಿನಿಮಾ ಬಹಿಷ್ಕರಿಸುವುದಾಗಿ ಹಲವರು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಮನೋಜ್ ಬಾಜಪೇಯಿ ನಾಯಕನಾಗಿ ನಟಿಸಿರುವ ‘ಗುಸ್ಕೋರ್ ಪಂಡತ್’ ಹೆಸರಿನ ಸಿನಿಮಾದ ಟ್ರೈಲರ್ ನಿನ್ನೆ (ಫೆಬ್ರವರಿ 03) ಬಿಡುಗಡೆ ಆಗಿದೆ. ಟ್ರೈಲರ್ನಲ್ಲಿ ತೋರಿಸಿರುವಂತೆ ಮನೋಜ್ ಬಾಜಪೇಯಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಮನೋಜ್ ಅವರು ಭ್ರಷ್ಟಾಚಾರ, ಸಿಟ್ಟು, ಕ್ರೂರತನದಿಂದ ತುಂಬಿರುವ ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ. ಆದರೆ ಪಾತ್ರದ ಬಗ್ಗೆ ಅಲ್ಲದೆ, ಸಿನಿಮಾಕ್ಕೆ ಇಟ್ಟಿರುವ ಹೆಸರು ಇದೀಗ ವಿವಾದಕ್ಕೆ ಕಾರಣವಾಗಿದೆ.
ಸಿನಿಮಾಕ್ಕೆ ‘ಗುಸ್ಕೋರ್ ಪಂಡತ್’ ಎಂದು ಹೆಸರಿಡಲಾಗಿದೆ. ಇದು ಪಂಡಿತರನ್ನು ದೂಷಿಸುತ್ತಿರುವಂತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಗುಸ್ಕೋರ್ ಪಂಡತ್’ ಎಂದರೆ ನುಸುಳುಕೋರ ಪಂಡಿತ್ ಎಂದರ್ಥ. ಅಸಲಿಗೆ ಸಿನಿಮಾದ ಹೆಸರು ‘ಗುಸ್ಕೋರ್ ಪಂಡಿತ್’ ಎಂದೇ ಇತ್ತು ಎನ್ನಾಗಿದೆ ಆದರೆ ಸೆನ್ಸಾರ್ನವರಿಗಾಗಿ ‘ಪಂಡಿತ್’ ಅನ್ನು ಬದಲಾಯಿಸಿ ‘ಪಂಡತ್’ ಮಾಡಲಾಗಿದೆ.
ಹಲವಾರು ಮಂದಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಬ್ರಾಹ್ಮಣರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಸಿನಿಮಾಕ್ಕೆ ಈ ರೀತಿಯ ಹೆಸರು ಇಡಲಾಗಿದೆ. ಸಿನಿಮಾದ ಹೆಸರು ಬದಲಾವಣೆ ಮಾಡದಿದ್ದಲ್ಲಿ ಸಿನಿಮಾ ಬಹಿಷ್ಕರಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಗುಸ್ಕೋರ್ ಮುಸ್ಲಿಂ’, ‘ಗುಸ್ಕೋರ್ ದಲಿತ್’ ಎಂದು ಹೆಸರಿಡಿ ನೋಡೋಣ ಎಂದು ಸಹ ಕೆಲವರು ಸವಾಲು ಹಾಕಿದ್ದಾರೆ.
For More Updates Join our WhatsApp Group :




