ಬೆಂಗಳೂರು: ಬೆಂಗಳೂರಿನ ಪೀಣ್ಯದ ಅಂದ್ರಹಳ್ಳಿಯಲ್ಲಿ ನಿನ್ನೆ (ಅ.17) ರಾತ್ರಿ ಸಿಲಿಂಡರ್ ಸ್ಫೋಟಗೊಂಡಿದ್ದು, ನಿವೃತ್ತ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಲಿಂಡರ್ ಸ್ಫೋಟದ ಪರಿಣಾಮದಿಂದ ಮನೆ ಮೇಲ್ಛಾವಣಿ ಮತ್ತು ಗೋಡೆಗಳು ಕುಸಿದಿದ್ದು, ಅಪಾರ ಹಾನಿಯಾಗಿದೆ. ಅಡುಗೆ ಮಾಡಲು ಹೋಗುವಾಗ ಈ ದುರ್ಘಟನೆ ನಡೆದಿದೆ.
ಗಾಯಗೊಂಡ ನಿವೃತ್ತ ಯೋಧರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ನೀಡಲಾಗಿದೆ. ಆದರೆ ಅವರ ಸ್ಥಿತಿ ಚಿಂತಾಜನಕವಾಗಿದೆ. ರುದ್ರೇಗೌಡ ಎಂಬುವವರು ಈ ಮನೆಯನ್ನು ನಿವೃತ್ತ ಯೋಧರಿಗೆ ಬಾಡಿಗೆಗೆ ನೀಡಿದ್ದರು, ಕಳೆದ 15 ವರ್ಷಗಳಿಂದ ಯೋಧರು ಈ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ. ಸ್ಫೋಟದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದೀಗ ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
For More Updates Join our WhatsApp Group :




