ಬೆಳಿಗ್ಗೆ 6:30 ಕ್ಕೆ ಲೋಕಾಯುಕ್ತ ದಾಳಿ ಆರಂಭ
ಬೆಂಗಳೂರು : ಬೆಂಗಳೂರಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕೋಟಿ ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ತಂಡ ಇಂದು ಬೆಳಿಗ್ಗೆ 6:30ರಿಂದ ದಾಳಿ ನಡೆಸಿದೆ. 2020 ರಿಂದ 2023 ರವರೆಗೆ ನಿಗಮದಲ್ಲಿ ಕೆಲಸ ಮಾಡಿದ್ದ ಗುರುರಾಜ್ ಎಂಬುವವರು ನೀಡಿದ ದೂರಿನ ಆಧಾರವಾಗಿ PC Act ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
4 ಕೋಟಿ ರೂಪಾಯಿ ಅವ್ಯವಹಾರ
ಲೋಕಾಯುಕ್ತ ಎಸ್.ಪಿ ಶಿವಪ್ರಕಾಶ್ ದೇವರಾಜ್ ಹೇಳುವಂತೆ, ಸಹಕಾರಿ ಸಂಘಗಳು ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ನೀಡಬೇಕಿದ್ದ ಸಾಲ ಮಂಜೂರಿಯಲ್ಲಿ ಅಕ್ರಮ ನಡೆದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ವಿತರಣೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಈ ಅವಧಿಯಲ್ಲಿ ಸುಮಾರು 3 ರಿಂದ 4 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬುದು ಆರಂಭಿಕ ಪರಿಶೀಲನೆಗೆ ತಿಳಿದುಬಂದಿದೆ.
8 ಅಧಿಕಾರಿಗಳ ವಿರುದ್ಧ ದೂರು
ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕ ವಿಜಯ್ ಕುಮಾರ್, ಅಂದಿನ ಜಿಲ್ಲಾ ವ್ಯವಸ್ಥಾಪಕ ಶ್ರೀಚಂದ್ರ.ವಿ.ಗೌಡ, ಅಂದಿನ ಪ್ರಭಾರ ವ್ಯವಸ್ಥಾಪಕಿ ಅಕ್ಷತಾ (ಇದೀಗ ತಾಲೂಕು ಅಭಿವೃದ್ಧಿ ಅಧಿಕಾರಿ, ಅಂದಿನ ಕಚೇರಿ ನಿರೀಕ್ಷಕ ಕೇಶವಮೂರ್ತಿ, ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಮಾದೇವಿಭಾಯಿ, ನೀಲಮ್ಮ, ವಿಜಯಲಕ್ಷ್ಮಿ ಸೇರಿ ಒಟ್ಟು 8 ಮಂದಿ ಅಧಿಕಾರಿಗಳ ವಿರುದ್ಧ ದೂರು ಕೇಳಿಬಂದಿದ್ದು, ಅವರಲ್ಲಿ ಮೂವರು ಈಗಾಗಲೇ ನಿವೃತ್ತರಾಗಿದ್ದಾರೆ. ಉಳಿದ ಐವರು ನಿಗಮದಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿನ್ನೆಲೆ ಆರೋಪಿಗಳಿಗೆ ಸೇರಿದ ಐದು ಮನೆಗಳ ಜೊತೆಗೆ ಬೆಂಗಳೂರು ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿಯಲ್ಲೂ ಸರ್ಚ್ ವಾರೆಂಟ್ ಆಧಾರದಲ್ಲಿ ಶೋಧ ನಡೆಸಲಾಗುತ್ತಿದೆ. ದಾಳಿ ವೇಳೆ ಕೆಲವು ಪ್ರಾಥಮಿಕ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೂ ಮೂಲ ದಾಖಲೆಗಳ ಶೋಧ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. 3 ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿರುವುದರಿಂದ, ಇನ್ನೂ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.
For More Updates Join our WhatsApp Group :




