ನಾಡಿನ ಜನರ ಬದುಕು ಬದಲಿಸಿದ ಗ್ಯಾರಂಟಿ ಯೋಜನೆಗಳು
ಧಾರವಾಡ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಂಚಗ್ಯಾರಂಟಿಗಳ ಸಮರ್ಥ ಜಾರಿಯಿಂದ ಸರ್ಕಾರ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಸಾಮಾನ್ಯ ಜನರ ಬದುಕಿನಲ್ಲಿ ನೇರ ಬದಲಾವಣೆ ತರುವ ಉದ್ದೇಶದಿಂದ ಜಾರಿಗೊಂಡ ಈ ಯೋಜನೆಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲೂ ವ್ಯಾಪಕ ಪರಿಣಾಮ ಬೀರಿವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಅವರು ಹೇಳಿದರು.
ಪಟ್ಟಣ ಪಂಚಾಯತಿ ಮುಂಭಾಗದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕ್ಷೇತ್ರ ಪ್ರಚಾರದ ಎಲ್ಇಡಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರ ಪ್ರಚಾರ ವಾಹನವು ಧಾರವಾಡ ಜಿಲ್ಲೆಯಾದ್ಯಂತ ಒಟ್ಟು 20 ಹಳ್ಳಿಗಳಲ್ಲಿ ಸಂಚರಿಸಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸಲಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿಯೂ ಯೋಜನೆಗಳ ಲಾಭಗಳ ಕುರಿತು ವಿವರಿಸಲಾಗುತ್ತದೆ ಎಂದು ಅವರು ಹೇಳಿದರು.
ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ತಲುಪಬೇಕು. ಕ್ಷೇತ್ರ ಪ್ರಚಾರ ವಾಹನದ ಮೂಲಕ ಮನೆಮನೆಗೆ ತೆರಳಿ ಎಲ್ಲ ಜನರಿಗೂ ಮನಮುಟ್ಟುವಂತೆ ಪ್ರಚಾರವನ್ನು ಮಾಡಬೇಕು ಎಂದು ತಿಳಿಸಿದರು.
*ಗ್ಯಾರಂಟಿ ಹಾಡುಗಳಿಗೆ ತಾಳ ಹಾಕಿ, ಹಾಡು ಹಾಡಿದ ಸಚಿವ ಲಾಡ್*
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ರೂಪುಗೊಂಡ ಕಲಾತಂಡಗಳೊಂದಿಗೆ ಸಚಿವರು ಸ್ವತಃ ಸಂಗೀತ ಹಾಡಿ, ತಾಳ ಬಾರಿಸಿ ಕಲಾವಿದರನ್ನು ಪ್ರೋತ್ಸಾಹಿಸಿದರು. ಅವರ ಈ ಸರಳ ಹಾಗೂ ಸ್ನೇಹಪೂರ್ಣ ನಡೆ ಜನಮನ ಗೆದ್ದಿತು. ಕಲೆಯ ಮೂಲಕ ಯೋಜನೆಗಳ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಗಮನಸೆಳೆಯಿತು. ಈ ಸಂದರ್ಭ ಸಚಿವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ಕಲಾವಿದರ ಪ್ರತಿಭೆಯನ್ನು ಮೆಚ್ಚಿದರು. ಈ ಮೂಲಕ ಸಾರ್ವಜನಿಕರಲ್ಲಿ ಉತ್ಸಾಹ ಮೂಡಿಸಿ, ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಅರಿವು ಹಾಗೂ ಭಾಗವಹಿಸುವ ಮನೋಭಾವವನ್ನು ಹೆಚ್ಚಿಸಿದರು.
For More Updates Join our WhatsApp Group :



