ಬೆಂಗಳೂರು: ಮನೆಯಲ್ಲಿ ದರೋಡೆ ನಡೆದಿರುವುದಾಗಿ ಸುಳ್ಳು ದೂರು ನೀಡಿದ್ದ ಪಿಎಸ್ಐ ಪತ್ನಿ ಹಾಗೂ ಆಕೆಯ ಸಹೋದರನ ವಿರುದ್ಧ ಕೋರಮಂಗಲ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಮನೆಯಲ್ಲಿದ್ದ 12 ಲಕ್ಷ ರೂಪಾಯಿ ನಗದು, ಚಿನ್ನಾಭರಣ ದರೋಡೆಯಾಗಿದೆ ಎಂದು ಕೋರಮಂಗಲ ಠಾಣೆಗೆ ಸುಳ್ಳು ದೂರು ನೀಡಿದ್ದ ಅಶೋಕನಗರ ಠಾಣಾ ಪಿಎಸ್ಐ ಪುಟ್ಟಸ್ವಾಮಿ ಅವರ ಪತ್ನಿ ಹಾಗೂ ಆಕೆಯ ಸಹೋದರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಪಿಎಸ್ಐ ಪುಟ್ಟಸ್ವಾಮಿ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಕೋರಮಂಗಲ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಮನೆಗೆ ಜುಲೈ 11ರಂದು ನುಗ್ಗಿದ್ದ ಕಳ್ಳರು ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ ನಗದು, ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ಪುಟ್ಟಸ್ವಾಮಿಯವರ ಪತ್ನಿ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಕೋರಮಂಗಲ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ ಸಹ ಮನೆಗೆ ಯಾರೂ ಕೂಡಾ ಬಂದಿರುವುದರ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ತನ್ನ ತವರು ಮನೆಯವರಿಗೆ ಹಣ ಹಾಗೂ ಚಿನ್ನಾಭರಣ ನೀಡಿದ್ದ ಪಿಎಸ್ಐ ಪತ್ನಿ ಗಂಡನ ಬಳಿ ಸುಳ್ಳು ದರೋಡೆ ಕಥೆ ಕಟ್ಟಿದ್ದರು ಎಂಬ ವಿಚಾರ ಬಯಲಾಗಿದೆ.