ಆನೇಕಲ್ : ಚಾಕುವಿನಿಂದ ಪ್ರಾವಿಜನ್ ಸ್ಟೋರ್ ಮಾಲೀಕನ ಕತ್ತು ಕೊಯ್ದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಮಂಗಳವಾರ ಹಾಡಹಗಲೇ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ನಡೆದಿದೆ. ಮಾದೇಶ್(40) ಕೊಲೆಯಾದ ವ್ಯಕ್ತಿ.
ಏರ್ಗನ್, ಚಾಕು ಸಮೇತ ಮನೆಗೆ ನುಗ್ಗಿದ್ದ ಹಂತಕರು
ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಾದೇಶ್, ಪ್ರಾವಿಜನ್ ಸ್ಟೋರ್ ಇಟ್ಟುಕೊಂಡಿದ್ದರು. ಇಂದು ಮನೆಯಲ್ಲಿದ್ದಾಗ ಏಕಾಏಕಿ ದುಷ್ಕರ್ಮಿಗಳು ಏರ್ಗನ್ ಮತ್ತು ಚಾಕು ಸಮೇತ ಮನೆಗೆ ನುಗ್ಗಿ ಹತ್ಯೆಗೈದು ಪರಾರಿ ಆಗಿದ್ದಾರೆ.
ಡಿಸಿಪಿ ನಾರಾಯಣ್ ಹೇಳಿದ್ದಿಷ್ಟು
ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು 112ಗೆ ಫೋನ್ ಬಂದಿತ್ತು. ಕೂಡಲೇ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಪಕ್ಕದ ಮನೆಯ ನಿವಾಸಿಯೊಬ್ಬರು ಇದನ್ನ ನೋಡಿದ್ದಾರೆ. ಕೂಡಲೇ ಆರೋಪಿಯನ್ನ ಹಿಡಿಯಲು ಮುಂದಾಗಿದ್ದರು. ಈ ವೇಳೆ ಬೈಕ್ ಅಡ್ಡಗಟ್ಟುವಾಗ ಅವರ ಮೇಲೂ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಘಟನಾ ಸ್ಥಳದಲ್ಲಿ ಬ್ಯಾಗ್, ಹೆಲ್ಮೆಟ್, ಏರ್ ಪಿಸ್ತೂಲ್ ಮತ್ತು ಮೆಟಲ್ ಡಿಟೆಕ್ಟರ್, ಟಾರ್ಚ್ ಕೂಡ ಪತ್ತೆಯಾಗಿದೆ. ಮನೆಯಲ್ಲಿ ಎರಡು ಲಕ್ಷ ರೂ ಹಣ ಕೂಡ ಇತ್ತು. ಅದನ್ನ ತೆಗೆದುಕೊಂಡು ಹೋಗಿಲ್ಲ ಎಂದರು.
ಮಾದೇಶ್, ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಬಾರಂದೂರು ನಿವಾಸಿ. ಕಳೆದ ಹದಿನೈದು ವರ್ಷಗಳಿಂದ ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. ಸಿಗರೇಟ್ ವ್ಯಾಪಾರ ಮತ್ತು ಪ್ರಾವಿಜನ್ ಸ್ಟೋರ್ ಇಟ್ಟುಕೊಂಡಿದ್ದರು. ಊರಿನಲ್ಲಿ ಜಮೀನು ಮಾರಾಟ ಮಾಡಿ ಇಲ್ಲಿ ಹೊಸ ಮನೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಗ್ಯಾಂಗ್ರೀನ್ ಆಗಿ ಕಾಲಿಗೆ ಗಾಯವಾಗಿ, ಮನೆಯಲ್ಲೇ ಇದ್ದರು. ಬೈಕ್ನಲ್ಲಿ ಒಬ್ಬನೇ ಬಂದು ಕೃತ್ಯ ಎಸಗಿ ಹೋಗಿದ್ದಾನೆ. ಪರಿಚಿತರೇ ಮಾಡಿದ್ದಾರಾ ಅಥವಾ ಯಾವ ಉದ್ದೇಶಕ್ಕೆ ಮಾಡಲಾಗಿದೆ ಎಂದು ತನಿಖೆ ನಡೆಯುತ್ತಿದೆ. ಎಸಿಪಿ ಸತೀಶ್ ನೇತೃತ್ವದಲ್ಲಿ ಆರೋಪಿಯ ಪತ್ತೆಗೆ ಮೂರು ತಂಡಗಳನ್ನ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
For More Updates Join our WhatsApp Group :
