ರೌಡಿಶೀಟರ್​​ಗಳ ಪರ ಫ್ಯಾನ್​ ಪೇಜ್​ ತೆರೆದಿದ್ದವರಲ್ಲಿ ಬಹುಪಾಲು ಅಪ್ರಾಪ್ತ ಬಾಲಕರು

ರೌಡಿಶೀಟರ್​​ಗಳ  ಪರವಾಗಿ ಸಮಾಜಿಕ ಜಾಲತಾಣದಲ್ಲಿ ತೆರಯಲಾಗಿರುವ 60 ಇನ್ಸ್ಟಾಗ್ರಾಮ್  ಮತ್ತು ಯೂಟ್ಯೂಬ್ ಅಕೌಂಟ್​​ಗಳನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸಿಸಿಬಿ ಜಂಟಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆದಿದ್ದು, ಎಲ್ಲ ಪೇಜ್​ಗಳ ಅಡ್ಮಿನ್​​ ಬಹುಪಾಲು ಅಪ್ರಾಪ್ತ ಬಾಲಕರು ಎಂಬುವುದು ಆಘಾತಕಾರಿ ಅಂಶವಾಗಿದೆ.

ಸಿಸಿಬಿ ಅಧಿಕಾರಿಗಳು ಪೇಜ್ ಅಡ್ಮಿನ್​ ಅಪ್ರಾಪ್ತ ಬಾಲಕರು ಮತ್ತು ಅವರ ಪೋಷಕರನ್ನು ಕಚೇರಿಗೆ ಕರೆಸಿ “ಪೋಷಕರಿಗೆ ಮಕ್ಕಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದರು. ಹಾಗೆ ಬಾಲಕರಿಗೆ ಪೇಜ್​ಗಳನ್ನು ಬಂದ್​ ಮಾಡುವಂತೆ ಹೇಳಿದರು. ಅಲ್ಲದೆ ಇನ್ಮುಂದೆ ಇಂತಹ ಕೆಲಸ ಮಾಡದಂತೆ” ಎಚ್ಚರಿಕೆ ನೀಡಿದರು. ಇದೇ ವೇಳೆ ಅಧಿಕಾರಿಗಳು ಸುಮಾರು 60 ಹೆಚ್ಚು ಸಾಮಾಜಿಕ ಜಾಲತಾಣದ ಅಕೌಂಟ್​ಗಳನ್ನು ಬಂದ್ ಮಾಡಿಸಿದರು.

ಬಾಲಕರಿಗೆ ರೌಡಿಶೀಟರ್​ಗಳ ಸಂಪರ್ಕ ಹೇಗೆ

ವಿಲ್ಸನ್ ಗಾರ್ಡನ್ ನಾಗ, ಮಾರತ್ ಹಳ್ಳಿ ರೋಹಿತ್, ಸೈಲೆಂಟ್ ಸುನಿಲ್, ಕುಣಿಗಲ್ ಗಿರಿ ಸೇರಿದಂತೆ ಹಲವಾರು ರೌಡಿಗಳ ಶಿಷ್ಯರು ಬಾಲಕರನ್ನು ಸಂಪರ್ಕಿಸುತ್ತಾರೆ. ಬಾಲಕರಿಗೆ ಇನ್ಸ್ಟಾಗ್ರಾಮ್​​ನಲ್ಲಿ ಖಾತೆ ತೆರೆಯುವಂತೆ ಹೇಳುತ್ತಾರೆ. ಬಳಿಕ ರೌಡಿಶೀಟರ್​​ಗಳ ವಿಡಿಯೋಗಳನ್ನು ಅವರಿಗೆ ನೀಡಿ ಎಡಿಟ್ ಮಾಡಿ ಪೇಜ್​ನಲ್ಲಿ ಹಾಕುವಂತೆ ಸೂಚಿಸುತ್ತಾರೆ.

ಬಾಲಕರು N BOSS, S BOSS, C BOSS ಅಂತ ಪೇಜ್ ತೆರಯುತ್ತಿದ್ದರು. ಬೆಂಗಳೂರು ಡಾನ್, ಅಂಡರ್ ವಲ್ಡ್ ಡಾನ್, ಅಂತ ಬಿಲ್ಡಪ್ ಕೊಟ್ಟು ಪೇಜ್​ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಬೆಂಕಿ, ಲಾಂಗು ಮಚ್ಚು ಎಫೆಕ್ಟ್​ಗಳನ್ನ ಹಾಕಿ ಸಿನಿಮಾ ಸ್ಟೈಲ್​ನಲ್ಲಿ ರೌಡಿಗಳಿಗೆ ಬಿಲ್ಡಪ್ ಕೊಡುತ್ತಿದ್ದರು. ಒಂದು ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಲು ರೌಡಿ ಶಿಷ್ಯಂದಿರು ಬಾಲಕರಿಗೆ 500 ರೂ. ನೀಡುತ್ತಿದ್ದರು. ಸಾಮಾಜದಲ್ಲಿ ರೌಡಿಗಳ ಹವಾ ಏನೆಂದು ತೋರಿಸುವ ಕಾರಣಕ್ಕೆ ಹೀಗೆ ಮಾಡಿಸುತ್ತಿದ್ದರು.

ಇದು ಅಡ್ಡದಾರಿ ಹಿಡಿಯುತ್ತಿರುವ ಯುವಕರಿಗೆ ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಇಂತಹ ಪೇಜ್​ಗಳಿಂದಾಗಿ ಯುವಜನತೆ ರೌಡಿಸಂನತ್ತ ಆಕರ್ಷಿತರಾಗುತ್ತಾರೆ ಎಂದು ಸಾರ್ವಜನಿಕರು ಸಿಬಿ ಡಿಸಿಪಿ ಶ್ರೀನಿವಾಸ್​​ ಗೌಡ ಅವರಿಗೆ ಹಲವರು ದೂರು ನೀಡಿದ್ದರು. ಈ ದೂರು ಆಧಾರದ ಮೇಲೆ ಸಿಸಿಬಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಹಣ ಕೊಟ್ಟು ವಿಡಿಯೋ ಮಾಡಿಸುತಿದ್ದವರಿಗೆ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *